ತುಮಕೂರು. ಏ.೨೩:ಸರಕಾರದ ಕಾರ್ಯಕ್ರಮಗಳನ್ನು ಅತ್ಯಂತ್ರ ಪ್ರಾಮಾಣಿಕವಾಗಿ, ದಕ್ಷತೆಯಿಂದ ಜನರಿಗೆ ತಲುಪಿಸುವ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾಡುತ್ತಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಬನಶಂಕರಿ ಬಡಾವಣೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಕಚೇರಿ -೧ ಹಾಗು ತುಮಕೂರು ಮತ್ತು ತುಮಕೂರು ಗ್ರಾಮಾಂತರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ಜನಪ್ರತಿನಿಧಿಗಳ ಮೂಲಕ ಅನುಷ್ಠಾನಕ್ಕೆ ಬರುವ ಕಾರ್ಯಕ್ರಮಗಳು ಅಷ್ಟೊಂದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಆದರೆ ಅದೇ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಯ ಮೂಲಕ ಬಹಳ ಸುಸೂತ್ರವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದಕ್ಕೆ ಬದ್ದತೆ ಇರುವ ನಿಮ್ಮಂತಹ ಸಾವಿರಾರು ಕಾರ್ಯಕರ್ತರ ಹಿಂದಿನ ಶ್ರಮವೇ ಕಾರಣ.ಎನ್.ಜಿ.ಓ ಒಂದು ಇಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು.
ಮೊಸರಿನಲ್ಲಿ ಕಲ್ಲು ಹುಡುಕುವ ಜನರು ಎಲ್ಲೆಡೆಯೂ ಇದ್ದೇ ಇರುತ್ತಾರೆ.ಆದರೆ ಇವುಗಳಿಗೆ ಅಂಜುವ ಅಗತ್ಯವಿಲ್ಲ. ನಿಮ್ಮಲ್ಲಿ ಪ್ರಾಮಾಣಿಕತೆ ಇಲ್ಲದಿದ್ದರೆ ಇಷ್ಟೊಂದು ಜನರನ್ನ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಕಾರ್ಯ ಯೋಜನೆಗಳನ್ಬು ಪ್ರಧಾನಿ ಮೋದಿ ಸಹ ಅಳವಡಿಸಿಕೊಳ್ಳು ಮುಂದಾಗಿದ್ದಾರೆ. ಮತ್ತಷ್ಟು ಜನರನ್ನು ತಲುಪುವಂತಾಗಲಿ ಎಂದು ಶುಭ ಕೋರಿದರು.
ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಶಾಲೆಗಳು,ದೇವಾಲಯಗಳು, ಕೆರೆಕಟ್ಟೆಗಳ, ಸ್ಮಶಾನ, ಆಸ್ಪತ್ರೆಗಳ ಜೀರ್ಣೋದ್ಧಾರದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಸಿದೆ.ದಕ್ಷತೆ ಮತ್ತು ಪ್ರಾಮಾಣಿಕತೆ ಯಿಂದ ಜನರನ್ನು ತಲುಪುವ ಕೆಲಸವನ್ಬು ಸಂಸ್ಥೆ ಮಾಡುತ್ತಿದೆ. ದೇವಾನು ದೇವತೆಗಳಿಗೂ ಆಗ್ನಿ ಪರೀಕ್ಷೆ ತಪ್ಪಿದ್ದಲ್ಲ.ಖಾವಂದರ ಮೇಲೆ ಏನೇ ಆರೋಪ ಬರಲಿ ನಾವು ನಿಮ್ಮೊಂದಿಗೆ ಇರುತ್ತೇವೆ. ದ್ವನಿ ಇಲ್ಲದವರ ದ್ವನಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಸಿಇಓ ಅನಿಲ್ ಕುಮಾರ್ ಮಾತನಾಡಿ, ಸಮ್ಮ ಗ್ರಾಮಾಭಿವೃದ್ದಿ ಸಂಸ್ಥೆಯ ಅಡಿಯಲ್ಲಿ ಸುಮಾರು ೨೨ ಸಾವಿರ ಸಂಘಗಳಿದ್ದು, ೪೪ ಸಾವಿರ ಸದಸ್ಯರನ್ನು ಹೊಂದಿದೆ. ರಾಜ್ಯದಲ್ಲಿ ೪೦ ಕಚೇರಿಯನ್ನು ಹೊಂದಿದೆ. ಸರಕಾರದೊಂದಿಗೆ ಸೇರಿ ಇದುವರೆಗೂ ೧೭೮೯ ಕೋಟಿ ರೂಗಳನ್ನು ಯಾವುದೇ ಸೆಕ್ಯುರಿಟಿ ಇಲ್ಲದೆ ಜನರಿಗೆ ಸಾಲ ಸೌಲಭ್ಯ ನೀಡಿದ್ದೇವೆ. ಇದರಿಂದ ಸುಮಾರು ೨೦ ಸಾವಿರ ಕೋಟಿ ವಹಿವಾಟು ನಡೆದಿದ್ದು, ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಕೆಲಸ ಇದಾಗಿದೆ ಎಂದರು.
ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಆರ್.ಕಾಮರಾಜ್ ಮಾತನಾಡಿ, ಕರ್ನಾಟಕ ರಾಜ್ಯದ ಅರ್ಥಿಕ,ಸಾಮಾಜಿಕ,ಶೈಕ್ಷಣಿಕ,ಸಾಮಾಜಿಕ, ಧಾರ್ಮಿಕ ಅಭಿವೃದ್ಧಿ ಗೆ ತನ್ನದೇ ಕೊಡುಗೆ ನೀಡಿದೆ. ಕೆಲವರ ಅಪಪ್ರಚಾರಕ್ಕೆ ತಲೆವಕೆಡಿಸಿಕೊಳ್ಳದೆ ಕೆಲಸ ಮುಂದುವರೆಸಲಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದರು.
ಪ್ರಾಸ್ತಾವಿಕ ನುಡಿಗಳ್ನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ತುಮಕೂರು ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ಕಳೆದ ೧೫ ವರ್ಷಗಳಿಂದ ಸಂಸ್ಥೆ ತುಮಕೂರು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದು, ೨.೮೦ ಲಕ್ಷ ಸದಸ್ಯರನ್ನು ಹೊಂದಿದೆ. ಎಸ್.ಬಿ.ಐ ಸಹಯೋಗದಲ್ಲಿ ೧೦ ಸಾವಿರ ಕೋಟಿ ರೂಗಳ ಸಾಲ ಸೌಲಭ್ಯ ನೀಡಲಾಗಿದೆ. ಸಂಸ್ಥೆ ಯಿಂದ ೧೦೪ ಕುಡಿಯುವ ನೀರಿನ ಘಟಕ, ೧೦೨ ಕೆರೆಗಳ ಅಭಿವೃದ್ಧಿ, ೬೬ ವಾತ್ಸಲ್ಯ ಮನೆ, ೧೫೫೦ ದೇವಾಲಯ ಅಭಿವೃದ್ಧಿ, ೩೮೯ ಹಾಲಿನ ಕೇಂದ್ರ, ೫೩೬ ಶಾಲೆಗಳ ಅಭಿವೃದ್ಧಿ, ೮೭೦೧ ಮಕ್ಕಳಿಗೆ ಶಿಷ್ಯ ವೇತನ ನೀಡಲಾಗಿದೆ. ಸುಮಾರು ೨.೧೦ ಲಕ್ಷ ಕುಟುಂಬಗಳನ್ನು ಜೀರೋದಿಂದ ಹೀರೋ ಮಾಡಲಾಗಿದೆ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಬೆಳ್ಳಾವೆಯ ಶ್ರೀ ಕಾರದ ವೀರಬಸವ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಕೃಷಿ,ಶಿಕ್ಷಣ, ವಸತಿ,ಕುಡಿಯುವ ನೀರು ಇನ್ನಿತರ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕಾರ್ಯ ಮೆಚ್ಚುವಂತಹದ್ದು,ಹಾಗಾಗಿಯೇ ಅವರ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಂಡು,ಜನರಿಗೆ ತಿಳಿ ಹೇಳುವ ಕೆಲಸ ಮಾಡಿದ್ದೇನೆ. ಸತ್ಯಕ್ಕೆ,ಧರ್ಮಕ್ಕೆ ಜಯವಿದೆ.ಎದೆಗುಂದುವ ಅಗತ್ಯವಿಲ್ಲ ಎಂದರು
ವೇದಿಕೆಯಲ್ಲಿ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ಕೆಯುಡಬ್ಲಜೆ ಅಧ್ಯಕ್ಷ ಯೋಗೀಶ್, ದಕ್ಷಿಣ ಕನ್ಬಡ ಮಿತ್ರ ವೃಂದದ ಅಧ್ಯಕ್ಷ ಅಮರನಾಥ ಶೆಟ್ಟಿ,ನಂದಿ ಕಾಂಪ್ಲೆಕ್ಸ್ ಮಾಲೀಕ ಯೋಗಾನಂದಸ್ವಾಮಿ, ಯೋಜನಾಧಿಕಾರಿ ಪ್ರಭಾಕರ ರಾಮನಾಯಕ್, ಪ್ರಭಾ ಕೆ.ಶೆಟ್ಟಿ, ಸಂದೇಶ, ಪಾದಯಾತ್ರಿಗಳ ಸಂಘದ ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು
