*ಎಐಡಿಎಸ್ಒ ತುಮಕೂರು ಜಿಲ್ಲಾ ಸಮಿತಿ*
*”ನಿಟ್ ಅವಾಂತರ: ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ -ಇದು ವ್ಯವಸ್ಥೆ ಮಾಡಿರುವ ಕಗ್ಗೊಲೆ !” – ಲಕ್ಕಪ್ಪ,*
NEET UG ಪರೀಕ್ಷೆಯಲ್ಲಿ ನಡೆದ ಅವಾಂತರಗಳನ್ನು ಖಂಡಿಸಿ, ಕೋಚಿಂಗ್ ಮಾಫಿಯಾಗಳ ಕೈಗೊಂಬೆಯಾಗಿರುವ NTA ಅನ್ನು ರದ್ದುಪಡಿಸಲು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ತುಮಕೂರಿನ ಟೌನ್ ಹಾಲ್ ಬಳಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯಿತು.
ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿಗಳಾದ
ಲಕ್ಕಪ್ಪ ರವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, NEET–2026ರ ಪ್ರಶ್ನೆಪತ್ರಿಕೆ ಸೋರಿಕೆ ಯಾವುದೋ ಆಕಸ್ಮಿಕ ಘಟನೆ ಅಲ್ಲ. 2022, 2024 ಹಾಗೂ ಈಗ 2026ರಲ್ಲೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪರೀಕ್ಷಾ ವ್ಯವಸ್ಥೆಯ ವೈಫಲ್ಯವನ್ನು ಬಹಿರಂಗಪಡಿಸಿವೆ. ಪ್ರತಿ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಯುತ್ತಿದ್ದರೂ, ಕೇಂದ್ರ ಶಿಕ್ಷಣ ಸಚಿವರಿಂದ ಹಿಡಿದು NTA ಯ ಯಾರೊಬ್ಬರೂ ಜವಾಬ್ದಾರಿ ಹೊರುವುದಕ್ಕೆ ತಯಾರಿಲ್ಲ. ಭ್ರಷ್ಟಾಚಾರ ತಡೆಗಟ್ಟುವ ಹೆಸರಿನಲ್ಲಿ ಜಾರಿಯಾದ NEET ಇಂದು ಕೋಟ್ಯಂತರ ರೂಪಾಯಿಗಳ ಕೋಚಿಂಗ್ ಉದ್ಯಮಕ್ಕೆ ದಾರಿ ಮಾಡಿಕೊಟ್ಟಿದೆ. ಶಿಕ್ಷಣ ಹಕ್ಕಾಗಿರದೆ ವ್ಯಾಪಾರದ ವಸ್ತುವಾಗಿ ಮಾರ್ಪಡುತ್ತಿದೆ.
ಮುಂದುವರಿದು, ಇಂದು ನೀಟ್ ಕೋಚಿಂಗ್ ಇಂಡಸ್ಟ್ರಿ ಯ ವಾರ್ಷಿಕ ಆದಾಯ 1ಲಕ್ಷ ಕೋಟಿಗೂ ಮೇಲ್ಪಟ್ಟಿದೆ. ಪ್ರತಿ ವರ್ಷ ವಿದ್ಯಾರ್ಥಿಗಳು ನೀಟ್ (NEET) ಪರೀಕ್ಷೆಗಾಗಿ ಕುಟುಂಬಗಳು ಸುಮಾರು ₹1.32 ಲಕ್ಷ ಕೋಟಿಗಳನ್ನು ಖರ್ಚು ಮಾಡುತ್ತವೆ. ನೀಟ್ (NEET) ವಿದ್ಯಾರ್ಥಿಗಳ ಕುಟುಂಬಗಳು ಮಾಡುವ ವೆಚ್ಚವು, ಕೇಂದ್ರ ಸರ್ಕಾರದ ಸಂಪೂರ್ಣ ಶಿಕ್ಷಣ ಬಜೆಟ್ಗೆ ₹1.4 ಲಕ್ಷ ಕೋಟಿ ಬಹುತೇಕ ಸಮನಾಗಿದೆ. ಈ ರೀತಿಯ ಪರೀಕ್ಷೆಗಳನ್ನು ಎದುರಿಸಲು ಆರ್ಥಿಕ ಒತ್ತಡ ಒಂದು ಕಡೆಯಾದರೆ, ಮಾನಸಿಕ ಒತ್ತಡ ಊಹೆಗೂ ಮೀರಿದ್ದು. ಕಳೆದ ಹತ್ತು ವರ್ಷಗಳಲ್ಲಿ 1.3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದೇ ಅವಧಿಯಲ್ಲಿ 1.5 ಲಕ್ಷ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆಗಿಂತಲೂ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗಿದೆ. ಈ ವರ್ಷ ನೀಟ್ ಪರೀಕ್ಷೆ ರದ್ದಾದ ಮೇಲೆ ಕಳೆದ 48 ಗಂಟೆಗಳಲ್ಲಿ ಆರು ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ಒಳಗೊಂಡಂತೆ ದೇಶಾದ್ಯಂತ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. *ಇದು ವಿದ್ಯಾರ್ಥಿಗಳ ಆತ್ಮಹತ್ಯೆ ಅಲ್ಲ, ವ್ಯವಸ್ಥೆ ಮಾಡಿರುವ ಕಗ್ಗೊಲೆ.”* ಎಂದು ಆಕ್ರೋಶ ವ್ಯಕ್ತಪಡಿಸಿದರು
*AIDSO ಮುಖ್ಯ ಬೇಡಿಕೆಗಳು:*
– NTA (National Testing Agency) ರದ್ದುಪಡಿಸಿ.
– NEET ಹಗರಣದ ತಪ್ಪಿತಸ್ಥರಿಗೆ ನಿದರ್ಶನೀಯ ಶಿಕ್ಷೆ ವಿಧಿಸಿ.
– ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಡಿಎಸ್ಒ ತುಮಕೂರು ಜಿಲ್ಲಾ ಸೆಕ್ರೆಟರಿಯಟ್ ಸದಸ್ಯರಾದ ಭರತ್ ವಹಿಸಿದ್ದರು. ಎಐಡಿಎಸ್ಒ ಪದಾಧಿಕಾರಿಗಳಾದ ಮಹಾಂತೇಶ್, ಸಾಗರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
