ತುಮಕೂರು : ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಂತಹ ಅಮಾನುಷ ಘಟನೆಯನ್ನು ಖಂಡಿಸಿ ಹತ್ಯೆಯಾದ ನೊಂದ ಜೀವಕ್ಕೆ ಶಾಂತಿ ಸಿಗಲೆಂದು ಹಾಗೂ ಆಕೆಯನ್ನು ಹತ್ಯೆ ಮಾಡಿದ ಆಕೆಯ ಹೆತ್ತ ತಂದೆಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಇಂದು ತುಮಕೂರು ಜಿಲ್ಲಾ ಅಂಬೇಡ್ಕರ್ ಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ಮನವಿಯನ್ನು ಸಲ್ಲಿಸಿದರು.
ಮನವಿ ಪತ್ರವನ್ನು ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಅಂಬೇಡ್ಕರ್ ಸೇನೆಯ ತುಮಕೂರು ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಸುಮಾರವರು ಮಾತನಾಡುತ್ತಾ ದೇಶಕ್ಕೆ ಸ್ವಾತಂತ್ರ÷್ಯ ಲಭಿಸಿ ೭೮ ವರ್ಷಗಳು ಕಳೆದರೂ ಸಹ ಜಾತಿ ಎಂಬ ಪಿಡುಗು ಇನ್ನೂ ಜೀವಂತವಾಗಿಯೇ ಉಳಿದಿದೆ, ನಮ್ಮ ದೇಶದ ಕಾನೂನಿಗೆ ಶಕ್ತಿ ಕುಂದಿದಿಯಾ ಎಂಬ ಅನುಮಾನಗಳು ಬರುತ್ತಿವೆ ಏಕೆಂದರೆ ಜನ್ಮ ಕೊಟ್ಟ ತಂದೆಯೇ ೭ ತಿಂಗಳ ಗರ್ಭಿಣಿ ಎಂಬುದನ್ನೂ ಸಹ ನೋಡದೇ ಕೇವಲ ತಮ್ಮ ಮರ್ಯಾದೆಗೋಸ್ಕರ ತಾನೇ ಜನ್ಮ ಕೊಟ್ಟ ಮಗಳನ್ನು ಕೊಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯಾದ ಘಟನೆಗಳು ಪದೇ ಪದೇ ಸಂಭವಿಸುತ್ತಿದ್ದರೂ ಸಹ ನಮ್ಮ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅದಕ್ಕಾಗಿ ಈ ಘಟನೆಯನ್ನೇ ಗಂಭೀರವಾಗಿ ಪರಿಗಣಿಸಿ ಹತ್ಯೆ ಮಾಡಿದ ವ್ಯಕ್ತಿಯನ್ನು ಗಲ್ಲು ಶಿಕ್ಷೆಗೆ ಗುರಿ ಮಾಡುವಂತೆ ಕೋರಿಗೆ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸುತ್ತಿದ್ದು, ಈ ಕುರಿತು ಕ್ರಮಕೈಗೊಳ್ಳದೇ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ದಲಿತಪರ ಸಂಘಟನೆಗಳು, ಮಹಿಳಾ ಸಂಘಟನೆಗಳೆಲ್ಲಾ ಜೊತೆಗೂಡಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಮನವಿ ಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ತುಮಕೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಕೆ.ಸುಮಾ, ಸಿ.ಪಿ.ಶಿವಲಿಂಗಮ್ಮ, ಸಿ.ಪಿ.ಶೋಭಾ, ಮಂಜಮ್ಮ, ಅಂಬೇಡ್ಕರ್ ಸ್ವಾಭಿಮಾನಿ ಜನಸೇನೆ ರಾಜ್ಯಾಧ್ಯಕ್ಷರಾದ ಎನ್.ಕುಮಾರ್, ಮುಖಂಡರುಗಳಾದ ರಾಜಶೇಖರಯ್ಯ, ಜಯಣ್ಣ, ಮಂಜುಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
