ತುಮಕೂರು- ಇಲ್ಲಿನ ವಿದ್ಯಾನಗರದಲ್ಲಿರುವ ವಿವೇಕಾನಂದ ಶಾಲೆಯಲ್ಲಿ 50ನೇ ವರ್ಷದ ಶಾಲಾ ವಾರ್ಷಿಕೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ನಗರದ ಡಾ. ಗುಬ್ಬಿವೀರಣ್ಣ ರಂಗಮಂದಿರದಲ್ಲಿ ವಿವೇಕಾನಂದ ಶಾಲೆಯು ವಿವೇಕ ದೀಪ ಎಂಬ ಹೆಸರಿನಡಿ ಕಾರ್ಯಕ್ರಮವನ್ನು ಆಯೋಜಸಲಾಗಿತ್ತು.
ಕಿರುತೆರೆ ನಟಿ ಹಾಗೂ ಬಹುಮುಖ ಪ್ರತಿಭೆ ಚಂದನ ಅನಂತಕೃಷ್ಣರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಿನ ಕಾಲದಲ್ಲಿ ವಿದ್ಯಾಭ್ಯಾಸ ಅತಿ ಮುಖ್ಯವಾದದ್ದು. ಸಂಗೀತ ಹಾಗೂ ನೃತ್ಯ ತರಗತಿಗಳಿಗೆ ಸೇರುವುದರಿಂದ ಮಾನಸಿಕ ಆರೋಗ್ಯ ಹೆಚ್ಚಾಗುತ್ತದೆ. ಓದುವುದು ಎಷ್ಟು ಮುಖ್ಯವೋ ಸಂಗೀತ, ನೃತ್ಯ ಕಲಿಕೆಯೂ ಅಷ್ಟೇ ಮುಖ್ಯ ಎಂದರು.
ಎಸ್ಎಸ್ಎಲ್ಸಿಯು ನಿಮ್ಮ ಭವಿಷ್ಯ ರೂಪಿಸುವ ಘಟ್ಟವಾಗಿದ್ದು, ಶಾಲೆಯ ದಿನಗಳನ್ನು ಮುಖ್ಯವಾಗಿಸಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಒತ್ತಡ ಹಾಕದೆ ಮಕ್ಕಳು ಯಾವ ವಿಷಯದಲ್ಲಿ ಆಸಕ್ತಿ ಹೊಂದಿರುತ್ತಾರೋ ಆ ವಿಷಯದ ಬಗ್ಗೆ ಅಭ್ಯಾಸ ಮಾಡಲು ಸಹಕರಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವಪ್ರಕಾಶ್ ಮಾತನಾಡಿ, ತಮ್ಮ ಶಾಲೆಯು ಅಭಿವೃದ್ಧಿ ಹೊಂದುವುದಕ್ಕೆ ಪೋಷಕರು, ಮಕ್ಕಳು ಹಾಗೂ ಶಿಕ್ಷಕರ ಪೋತ್ಸಾಹವೇ ಪ್ರಮುಖ ಕಾರಣ ಎಂದು ಹೇಳಿದರು.
ಶಾಲೆಯ ಮುಖ್ಯಶಿಕ್ಷಕಿ ಕುಸುಮ ಮಾತನಾಡಿ, ವಿವೇಕಾನಂದ ಶಾಲೆಗೆ ಶಿಕ್ಷಕಿಯಾಗಿ ಸೇರಿದ್ದು, ಈ ಶಾಲೆಯಲ್ಲಿ ಈಗ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ತಮ್ಮ ಸೇವೆಯು ಈಗಾಗಲೇ 25 ವರ್ಷ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ ಎಸ್. ರಾಜಶೇಖರ್, ಎಸ್. ನಂಜುಂಡಪ್ಪ, ಎಂ. ಗೋವಿಂದರಾಜು, ಟಿ.ಸಿ. ನಾಗೇಂದ್ರ, ಶಿವಪ್ರಸಾದ್, ಸುಧೀರ್, ಶಿಕ್ಷಕಿ ಶೀಲಾ ಮತ್ತಿತರರು ಪಾಲ್ಗೊಂಡಿದ್ದರು.
ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
