ಭೂಸ್ವಾಧೀನ ಕೈಬಿಡಲು ಒತ್ತಾಯಿಸಿ ಜೂನ್ 5ರಂದು ವಿಧಾನಸೌಧ ಮುತ್ತಿಗೆ
ತುಮಕೂರು: ರಾಜ್ಯ ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ರೈತರಿಂದ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳುವ ನೀತಿಯನ್ನು ವಿರೋಧಿಸಿ ಜೂನ್.5 ರಂದು ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೈಕ್ ಜಾಥಾ ಮೆರವಣಿಗೆ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲಿದ್ದೇವೆ ಎಂದು ರಾಜ್ಯ ಹಸಿರು ಸೇನೆ ಸಂಚಾಲಕ ಆನಂದ ಪಟೇಲ್ ಹುಲಿಕಟ್ಟೆ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಕಳೆದ ಹಲವು ವರ್ಷಗಳಿಂದ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳುತ್ತಿದ್ದು,ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.ಬಿಡದಿ ಪ್ರದೇಶದಲ್ಲಿ ಸುಮಾರು 10 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದ್ದು, ಇದನ್ನು ವಿರೋಧಿಸಿ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸುತ್ತಿದ್ದಾರೆ. ಇದೇ ರೀತಿಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಸುಮಾರು 2,853 ಎಕರೆ ಅಡಿಕೆ ಮತ್ತು ತೆಂಗಿನ ತೋಟಗಳಿರುವ ಫಲವತ್ತಾದ ಭೂಮಿಯನ್ನು ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆಗಳ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಆ ಭೂಮಿಗಳಲ್ಲಿ ಎಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿವೆ, ಎಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಎಂಬುದರ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು.
ಕೆಐಎಡಿಬಿ ರೈತರಿಂದ ಭೂಮಿಯನ್ನು ಪಡೆದು ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡುತ್ತಿದ್ದರೂ, ಅನೇಕ ಕಡೆಗಳಲ್ಲಿ ಕೈಗಾರಿಕೆಗಳು ಆರಂಭವಾಗಿಲ್ಲ. ಹಂಚಿಕೆಗೊಂಡ ಭೂಮಿಯನ್ನು ಹಲವು ವರ್ಷಗಳ ಕಾಲ ಖಾಲಿ ಬಿಟ್ಟು ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ.
ರಾಜ್ಯ ಸರ್ಕಾರ ತಕ್ಷಣವೇ “ಲ್ಯಾಂಡ್ ಆಡಿಟ್” ನಡೆಸಿ, ಇದುವರೆಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿ, ಸ್ಥಾಪಿತ ಕೈಗಾರಿಕೆಗಳು, ಸೃಷ್ಟಿಯಾದ ಉದ್ಯೋಗಗಳು ಹಾಗೂ ಖಾಲಿ ಉಳಿದಿರುವ ಭೂಮಿಯ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಬೇಕು.
ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ಬಳಸುವ ಬದಲು, ಕೃಷಿಗೆ ಯೋಗ್ಯವಲ್ಲದ ಭೂಮಿಗಳನ್ನು ಗುರುತಿಸಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಸರ್ಕಾರವು ಎ, ಬಿ ಮತ್ತು ಸಿ ವರ್ಗದ ಭೂಮಿಗಳ ವರ್ಗೀಕರಣ ಮಾಡಿ, ಕೃಷಿಗೆ ಯೋಗ್ಯವಲ್ಲದ ಸಿ ವರ್ಗದ ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆದ್ಯತೆ ನೀಡಬೇಕು.
ಸರ್ಕಾರದ ಬಳಿ ಇರುವ ಖಾಲಿ ಸರ್ಕಾರಿ ಭೂಮಿಯನ್ನು ಮೊದಲು ಕೈಗಾರಿಕಾ ಉದ್ದೇಶಗಳಿಗೆ ಬಳಸಬೇಕು. ರೈತರ ಬದುಕಿನ ಆಧಾರವಾಗಿರುವ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳುವ ನೀತಿಯನ್ನು ಸರ್ಕಾರ ಕೈಬಿಡಬೇಕು.ಅಕ್ರಮ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡದಿದ್ದರೆ ಜೂನ್.5 ರಂದು ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೈಕ್ ಜಾಥಾ ಮೆರವಣಿಗೆ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲಿದ್ದೇವೆ ಎಂದು
ಎಚ್ಚರಿಸಿದರು.
ವರದಿ-ಎ ಎನ್ ಪಿ
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಸ್. ಧನಂಜಯಾರಾಧ್ಯ, ಜಿಲ್ಲಾ ಸಂಚಾಲಕಿ ಶಶಿಕಲಾ, ತಾಲೂಕು ಮುಖಂಡರಾದ ಮಲ್ಲಿಕಾರ್ಜುನಯ್ಯ, ರೇಣುಕಮ್ಮ, ಗಂಗಾಧರಯ್ಯ, ಸಣ್ಣಧ್ಯಾಮೇಗೌಡ, ಸಿದ್ದರಾಜು, ರಾಜಣ್ಣ, ಕಲ್ಪನಾ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
