ನಶೆ ಮುಕ್ತ ಕರ್ನಾಟಕ ನಿರ್ಮಾಣ ಮಾಡುವಂತೆ ತೇಜಸ್ವಿ ಆಗ್ರಹ
ಮೈಸೂರು:ಇತ್ತೀಚಿನ ದಿನಗಳಲ್ಲಿ ರಾಜ್ಯದ ಅನೇಕ ಭಾಗಗಳಲ್ಲಿ ಮಾದಕ ವಸ್ತುಗಳ ಮಾಫಿಯಾ ಹೆಚ್ಚಾಗುತ್ತಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರು ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಉತ್ಪಾದನಾ ಘಟಕಗಳನ್ನು ತೆರೆದಿರುವುದು ಆತಂಕಕಾರಿ ಬೆಳವಣಿಗೆ ಉಂಟುಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಮಾದಕ ದ್ರವ್ಯ ಗಳನ್ನು ಉತ್ಪಾದನೆ ಮಾಡುವ ಮೂಲಕ ಸಮಾಜ ಘಾತುಕ ಶಕ್ತಿಗಳು ಯುವ ಸಮುದಾಯವನ್ನು ಗುರಿಯಾಗಿಸಿ ಯುವ ಪೀಳಿಗೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ತೇಜಸ್ವಿ ಆರೋಪಿಸಿದ್ದಾರೆ.
ಇಂತಹ ಸಮಾಜ ಘಾತುಕ ಶಕ್ತಿಗಳ ವಿರುದ್ದ ರಾಜ್ಯ ಸರ್ಕಾರ ಕಠಿಣ, ನಿರ್ದಾಕ್ಷಿಣ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಶಾಶ್ವತವಾಗಿ ಕರ್ನಾಟಕ ರಾಜ್ಯವನ್ನು ನಶೆ (ಡ್ರಗ್ಸ್) ಮುಕ್ತ ಮಾಡಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯ ವತಿಯಿಂದ ನಶೆ ಮುಕ್ತ ಕರ್ನಾಟಕ ನಿರ್ಮಾಣ ಎಂಬ ಘೋಷವಾಕ್ಯದೊಂದಿಗೆ ನಿರಂತರ ಅಭಿಯಾನ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
