ಪರಿಹಾರವಿಲ್ಲದೆ ವಿದ್ಯುತ್ ಮಾರ್ಗ ಕಾಮಗಾರಿ: ರೈತರ ಪ್ರತಿಭಟನೆ.
ಕಾಮಗಾರಿ ಸುತ್ತ ಪೋಲಿಸ್ ಸರ್ಪ ಕಾವಲು
ತುಮಕೂರು-ತಿಪಟೂರು:
ತಾಲೂಕಿನ ಕಸಬಾ ಹೋಬಳಿಯ ಹೊನವಳ್ಳಿ ರೈಲ್ವೆ ನಿಲ್ದಾಣಕ್ಕೆ ವಿದ್ಯುತ್ ಪೂರೈಕೆಯ ಉದ್ದೇಶದಿಂದ ಕೆಪಿಟಿಸಿಎಲ್ ಕೈಗೆತ್ತಿಕೊಂಡಿರುವ 110 ಕೆವಿ ವಿದ್ಯುತ್ ಮಾರ್ಗ ಕಾಮಗಾರಿಗೆ ರೈತರ ಭೂಮಿಯನ್ನು ಬಳಸಲಾಗುತ್ತಿದ್ದು, ಯೋಗ್ಯ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ಕರೀಕೆರೆ ಗ್ರಾಮದ ಸರ್ವೆ ನಂಬರ್ 212, 213 ಸೇರಿದಂತೆ ಹಲವು ಜಮೀನುಗಳಲ್ಲಿ ಬೆಳಗುಂಬ 110/11 ಕೆವಿ ಕೇಂದ್ರದಿಂದ ರೈಲ್ವೆ ಟ್ರಾಕ್ಷನ್ 110/66 ಕೆವಿ ಉಪಕೇಂದ್ರಕ್ಕೆ ವಿದ್ಯುತ್ ಮಾರ್ಗ ನಿರ್ಮಾಣ ನಡೆಯುತ್ತಿದೆ. ಯಾವುದೇ ಪರಿಹಾರ ಆದೇಶ ಪತ್ರಗಳು ಹಾಗೂ ಲಿಖಿತ ದಾಖಲೆಗಳನ್ನು ನೀಡದೇ ಕಾಮಗಾರಿ ಆರಂಭಿಸಲಾಗಿದೆ ಎಂದು ರೈತರು ಆರೋಪಿಸಿದರು.
ಕಾಮಗಾರಿಯನ್ನು ಪ್ರಾರಂಭಿಸಲು ಬಂದ ಗುತ್ತಿಗೆದಾರ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಬೆಳಿಗ್ಗೆ ರೈತರ ವಿರೋಧದಿಂದ ಅಧಿಕಾರಿಗಳು ಹಿಂದಿರುಗಿದ್ದು, ಬಳಿಕ ಯಾವುದು ಆದೇಶ ಪತ್ರದೊಂದಿಗೆ ಮತ್ತು ಪೊಲೀಸ್ ಬಿಗಿ ಭದ್ರತೆಯಲ್ಲಿ ರೈತರನ್ನು ತನ್ನ ಜಮೀನಿನಿಂದ ದೂರ ಸರಿಸಿ ಕಾಮಗಾರಿಯ ಸುತ್ತ ಪೋಲಿಸಿನ ಸರ್ಪ ಕಾವಲು ನಡೆಸಿ ಕಾಮಗಾರಿ ಆರಂಭಿಸಲಾಯಿತು. ಪರಿಹಾರ ದೊರೆಯುವವರೆಗೆ ಕೆಲಸ ಸ್ಥಗಿತಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು.
