ತುಮಕೂರು: ಸಮರ್ಪಣ ವಿಕಲಚೇತನರ ಪುನರ್ವಸತಿ ಕೇಂದ್ರ, ರಾವತನಹಳ್ಳಿ (ಕೋಳಾಲ ಅಂಚೆ), ಕೊರಟಗೆರೆ ತಾಲ್ಲೂಕಿನ ಇಬ್ಬರು ದೃಷ್ಟಿ ಚೇತನ ವಿದ್ಯಾರ್ಥಿಗಳು 2025–26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ವಿದ್ಯಾರ್ಥಿನಿ ರೇಣುಕಮ್ಮ ಅವರು 425ರಲ್ಲಿ 376 ಅಂಕಗಳನ್ನು (88%) ಗಳಿಸಿದ್ದು, ವಿದ್ಯಾರ್ಥಿ ದರ್ಶನ್ ಅವರು 425ರಲ್ಲಿ 365 ಅಂಕಗಳನ್ನು (85%) ಪಡೆದು ಉತ್ತೀರ್ಣರಾಗಿದ್ದಾರೆ. ಇಬ್ಬರೂ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ತುಮಕೂರು ಜಿಲ್ಲೆಯ ತಿಮ್ಮಸಂದ್ರದ ಸರ್ಕಾರಿ ಫ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ದೃಷ್ಟಿ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಇವರಿಬ್ಬರೂ ಇಂಗ್ಲಿಷ್ ಹಾಗೂ ಹಿಂದಿ ಭಾಷಾ ವಿನಾಯಿತಿ ಪಡೆದಿದ್ದು, 425 ಅಂಕಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರು, ಪಾಲಕರು ಹಾಗೂ ಸಮರ್ಪಣ ಸಂಸ್ಥೆಯ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸಿದ್ದಾರೆ.
