ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾದ ತುಮಕೂರು :
ರಾಜ್ಯದ ಬಡವರ ಹಿತ ಕಾಯುವಲ್ಲಿ ಮತ್ತು ನುಡಿದಂತೆ ನಡೆಯುವಲ್ಲಿ ನಮ್ಮ ಸರ್ಕಾರ ಸದಾ ಬದ್ಧ, ಕೇವಲ ಒಂದೇ ವರ್ಷದಲ್ಲಿ ಐದೂ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ – ಮುಖ್ಯಮಂತ್ರಿ ಸಿದ್ದರಾಮಯ್ಯ
ತುಮಕೂರು, ಮೇ ೧೯ (ಕರ್ನಾಟಕ ವಾರ್ತೆ): ನಮ್ಮ ಸರ್ಕಾರ ಯಾವಾಗಲೂ ನುಡಿದಂತೆ ನಡೆಯುವ ಸರ್ಕಾರ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಸದಾ ಮಾಡಿಕೊಂಡು ಬಂದಿದ್ದೇವೆ. ನಮ್ಮ ಸರ್ಕಾರ ರಾಜ್ಯದ ಬಡವರ ಹಿತ ಕಾಯುವಲ್ಲಿ ಸದಾ ಬದ್ದವಾಗಿದೆ, ಕೇವಲ ಒಂದು ವರ್ಷದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಿಳಿಸಿದರು.
ರಾಜ್ಯ ಸರ್ಕಾರಕ್ಕೆ ಮೂರು ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಮಂಗಳವಾರ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ, “ಮೂರು ವರ್ಷಗಳ ಸಾಧನಾ ಸಮರ್ಪಣಾ” ಸಮಾವೇಶ, ಮಾದರಿಯ ವಸ್ತು ಪ್ರದರ್ಶನ ಮತ್ತು ತುಮಕೂರು ಜಿಲ್ಲೆಯಲ್ಲಿ ನಡೆದಿರುವ ೬೮೨ ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಹೇಳಿದಂತೆ, ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬರಿಗೂ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ಸಿಗಬೇಕು. ನಮ್ಮ ಸರ್ಕಾರ ಯಾವುದೇ ಜಾತಿ, ಧರ್ಮ ಅಥವಾ ಬೇಧ-ಭಾವವಿಲ್ಲದೆ, ಎಲ್ಲಾ ಸಮುದಾಯಗಳ ಬಡ ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವ ಕೆಲಸ ಮಾಡಿದೆ ಎಂದು ತಿಳಿಸಿದರು.
ಕಳೆದ ಚುನಾವಣೆ ಸಂದರ್ಭದಲ್ಲಿ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಸಿದ್ಧಗೊಂಡಿದ್ದ ಪ್ರಣಾಳಿಕೆಯಲ್ಲಿ ಒಟ್ಟು ೫೯೨ ಭರವಸೆಗಳನ್ನು ಜನರಿಗೆ ನೀಡಲಾಗಿತ್ತು. ಆ ಪೈಕಿ ಈಗಾಗಲೇ ೨೫೦ಕ್ಕೂ ಹೆಚ್ಚು ಭರವಸೆಗಳನ್ನು ಸರ್ಕಾರ ಯಶಸ್ವಿಯಾಗಿ ಈಡೇರಿಸಿದ್ದು, ಉಳಿದ ಭರವಸೆಗಳನ್ನೂ ಸಹ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನಾವು ನುಡಿದಂತೆ ನಡೆದಿದ್ದೇವೆ. ತಲಾದಾಯದಲ್ಲಿ ಕನ್ನಡಿಗರು ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇದ್ದಾರೆ. ಇಡೀ ದೇಶದ ಜಿಎಸ್ಟಿಗೆ ನಮ್ಮ ಕೊಡುಗೆಯೇ ಅಪಾರವಾಗಿದೆ. ದೇಶದ ತಲಾದಾಯಕ್ಕಿಂತ ರಾಜ್ಯದ ತಲಾದಾಯ ಹೆಚ್ಚಾಗಿರುವ ರೀತಿಯಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ ಎಂದು ತಿಳಿಸಿದರು.
೨೦೧೩ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನೀಡಿದ್ದ ೧೬೫ ಭರವಸೆಗಳಲ್ಲಿ ೧೫೮ ಭರವಸೆಗಳನ್ನೂ ಈಡೇರಿಸಲಾಗಿತ್ತು. ಅಷ್ಟೇ ಅಲ್ಲದೆ, ಪ್ರಣಾಳಿಕೆಯಲ್ಲಿ ಘೋಷಿಸದಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಸುಮಾರು ೩೦ಕ್ಕೂ ಹೆಚ್ಚು ಆದ್ಯತಾ ಕಾರ್ಯಕ್ರಮಗಳನ್ನು ಜಾರಿಗೆ ತಂದ ಇತಿಹಾಸ ನಮ್ಮ ಸರ್ಕಾರದ್ದಾಗಿದೆ ಎಂದು ಅವರು ಸ್ಮರಿಸಿಕೊಂಡರು.
ನಮ್ಮ ಪಂಚ ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರು ಹಾಗೂ ಸ್ವತಃ ದೇಶದ ಪ್ರಧಾನಮಂತ್ರಿಯವರೂ ಸೇರಿದಂತೆ ಹಲವರು ಈ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ, ಒಂದು ವೇಳೆ ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಹಣವಿರುವುದಿಲ್ಲ ಎಂದು ಟೀಕಿಸಿದ್ದರು. ಆದರೆ, ನಾವು ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಈ ಎಲ್ಲಾ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ. ಇದಕ್ಕಾಗಿ ರಾಜ್ಯ ಸರ್ಕಾರ ಈವರೆಗೆ ೧.೪೦ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಅಲ್ಲದೆ, ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದೇವೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬಡವರ ಮತ್ತು ಶೋಷಿತರ ಬದುಕಿನಲ್ಲಿ ಸಾಮಾಜಿಕ ಬದಲಾವಣೆ ತಂದಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಂದು ಇಡೀ ವಿಶ್ವಕ್ಕೇ ಮಾದರಿಯಾಗಿವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳು ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. “ಇಡೀ ವಿಶ್ವದಲ್ಲೇ ಬಡವರ ಬದುಕಿನಲ್ಲಿ ಸಾಮಾಜಿಕ ಬದಲಾವಣೆ ತಂದ ಈ ಐದು ಗ್ಯಾರಂಟಿಗಳು ಜಗತ್ತಿಗೆ ಮಾದರಿ ಎಂದು ಆಕ್ಸ÷್ಫರ್ಡ್ ಯುನಿವರ್ಸಿಟಿಯಲ್ಲಿ ಉಲ್ಲೇಖಿಸಲಾಗಿದೆ” ಇದು ನಮ್ಮ ಸರ್ಕಾರಕ್ಕೆ ಹೆಮ್ಮೆ ಎಂದು ತಿಳಿಸಿದರು.
ಬೆಂಗಳೂರಿನ ಜನಸಂಖ್ಯೆ ಮತ್ತು ಒತ್ತಡವನ್ನು ನಿಯಂತ್ರಿಸಲು ಬೆಂಗಳೂರಿನ ಉತ್ತರ ಭಾಗದಲ್ಲಿರುವ ತುಮಕೂರು ನಗರವನ್ನು ‘ಎರಡನೇ ಬೆಂಗಳೂರು’ ಆಗಿ ಪರಿವರ್ತಿಸಬೇಕು ಎಂಬುದು ಸಚಿವ ಡಾ. ಜಿ. ಪರಮೇಶ್ವರ ಅವರ ದೊಡ್ಡ ಸಂಕಲ್ಪವಾಗಿದೆ. ಈ ಐತಿಹಾಸಿಕ ಕಲ್ಪತರು ನಾಡನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ರಾಜ್ಯದ ಸುಮಾರು ೧ ಕೋಟಿ ೧೧ ಲಕ್ಷ ಜನರಿಗೆ ಭೂ ಗ್ಯಾರಂಟಿ ಯೋಜನೆಯ ಸೌಲಭ್ಯ ಸಿಗುತ್ತಿದೆ. ಕೇವಲ ಬೆಂಗಳೂರು ನಗರ ಒಂದರಲ್ಲೇ ೨೭ ಲಕ್ಷಕ್ಕೂ ಹೆಚ್ಚು ಜನರಿಗೆ ಖಾತೆ ಬದಲಾವಣೆ, ಆಸ್ತಿ ದಾಖಲೆಗಳು, ಪೋಟೋ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಅವರ ಮುಂದಿನ ಪೀಳಿಗೆಗೆ ಭದ್ರತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ತಿಳಿಸಿದರು.
ಬಡವರು, ರೈತರು, ಕಾರ್ಮಿಕರು ಮತ್ತು ಶೋಷಿತರ ಸ್ವಾಭಿಮಾನದ ಬದುಕಿಗಾಗಿ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದಕ್ಕಾಗಿ ಈ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ ೨ ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದರು.
ಹಲವು ದಶಕಗಳಿಂದ ರಾಜ್ಯದ ಹಟ್ಟಿ, ತಾಂಡ, ಮಜರೆ ಗ್ರಾಮಗಳು ಕಂದಾಯ ಗ್ರಾಮಗಳಾಗದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇದನ್ನು ರಾಜ್ಯ ಕಂದಾಯ ಇಲಾಖೆ ಆದ್ಯತೆ ಕಾರ್ಯಕ್ರಮವಾಗಿ ತೆಗೆದುಕೊಂಡು ೧೪ಲಕ್ಷಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ರಾಜ್ಯದಲ್ಲಿ ವಿತರಿಸಿದೆ. ತುಮಕೂರು ಜಿಲ್ಲೆಯೊಂದರಲ್ಲೇ ೨೨ಸಾವಿರ ಕಂದಾಯ ಗ್ರಾಮಗಳ ಹಕ್ಕು ಪತ್ರಗಳನ್ನು ನೀಡುವ ಮೂಲಕ ಇಂದು ಗಿನ್ನಿಸ್ ದಾಖಲೆ ಸೃಷ್ಟಿಸಲಾಗಿದೆ ಎಂದು ಅವರು ತಿಳಿಸಿದರು. ಅಲ್ಲದೆ, ತುಮಕೂರು ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ೬೫೦ ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ನೀಡಿ ಇಂದು ಮತ್ತೊಂದು ದಾಖಲೆ ಸೃಷ್ಟಿಸಿದೆ ಎಂದು ತಿಳಿಸಿದರು.
ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು, ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ರಾಜ್ಯಕ್ಕೆ ೧೦ ಲಕ್ಷದ ೨೪ ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಹರಿದುಬಂದಿದೆ ಎಂದು ತಿಳಿಸಿದರು. “ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ನೀಡಿದ ಪ್ರತಿಯೊಂದು ಮಾತನ್ನು ಉಳಿಸಿಕೊಂಡಿದ್ದಾರೆ ಎಂದರು.
ಕAದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಕಳೆದ ೧೬ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಾಗೂ ಅಸಾಧ್ಯವೆನಿಸಿದ್ದ ಕಂದಾಯ ಇಲಾಖೆಯ ಕೆಲಸ ಕಾರ್ಯಗಳನ್ನು ಇಂದು ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಕಂದಾಯ ಇಲಾಖೆಯು ಒಂದು ಕ್ರಾಂತಿಕಾರಿ ಬದಲಾವಣೆ ಮತ್ತು ಪರಿವರ್ತನೆಯನ್ನು ತರಲಾಗಿದೆ ಎಂದರು.
ಕಂದಾಯ ಇಲಾಖೆಯಲ್ಲಿ ಬಾವಿಯ ಆಳದಷ್ಟೇ ಕೆಲಸಗಳಿರುತ್ತವೆ. ಎಷ್ಟೇ ಕೆಲಸ ಮಾಡಿದರೂ ಇನ್ನೂ ಮಾಡಬೇಕಾದದ್ದು ಬಾಕಿ ಇರುತ್ತದೆ. ಸಾರ್ವಜನಿಕರ ಪ್ರೋತ್ಸಾಹ ಮತ್ತು ಶಕ್ತಿಯಿಂದ ಬಾಕಿ ಉಳಿದಿರುವ ಎಲ್ಲಾ ಕಂದಾಯ ಸೇವೆಗಳನ್ನು ಶೀಘ್ರದಲ್ಲೇ ಜನರ ಬಾಗಿಲಿಗೆ ತಲುಪಿಸಲು ನಮ್ಮ ಇಲಾಖೆ ಬದ್ಧವಾಗಿದೆ. ವಿಧಾನಸೌಧದಲ್ಲಿ ನಮಗೆ ದೊರೆತಿರುವ ಅಧಿಕಾರವು ಕೇವಲ ಆಡಳಿತ ನಡೆಸುವುದಕ್ಕಾಗಿ ಅಲ್ಲ. ಬದಲಿಗೆ ಸಾರ್ವಜನಿಕರ ಸೇವೆಗಾಗಿ ಎಂಬುದನ್ನು ಅರಿತಿದ್ದೇವೆ ಎಂದರು.
ರಾಜ್ಯದಲ್ಲಿನ ಲಂಬಾಣಿ ತಾಂಡಗಳು, ಗೊಲ್ಲರಹಟ್ಟಿ ಹಾಗೂ ನಾಯಕರ ಹಟ್ಟಿಗಳ ನಿವಾಸಿಗಳಿಗೆ ಶಾಶ್ವತ ನೆಲೆಯನ್ನು ತಲುಪಿಸುವ ನಿಟ್ಟಿನಲ್ಲಿ ಸರ್ಕಾರವು ಆಂದೋಲನದ ರೂಪದಲ್ಲಿ ಅವರ ಮನೆ ಬಾಗಿಲಿಗೆ ಹೋಗಿ ಹಕ್ಕುಪತ್ರ ವಿತರಿಸುವ ಐತಿಹಾಸಿಕ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಹಿಂದೆ ಕೃಷಿ ಹಾಗೂ ಕೂಲಿ ಕಾರ್ಮಿಕರಾಗಿ ಊರಿನ ಹೊರಗಿನ ವಸತಿ ಪ್ರದೇಶಗಳಲ್ಲಿ ಜನರು ವಾಸಿಸುತ್ತಿದ್ದರು. ಅವರಿಗೆ ಯಾವುದೇ ಹಕ್ಕುಪತ್ರ ಇರಲಿಲ್ಲ. ಇಂದು ಕೃಷಿ ಮತ್ತು ಕೂಲಿ ಕಾರ್ಮಿಕರಿಗೆ ಹಕ್ಕುಪತ್ರವನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಕ್ಕೆ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸಿದ್ದಪಡಿಸಿದ್ದ ಸರ್ಕಾರದ ೩ ವರ್ಷಗಳ ಸಾಧನೆಗಳನ್ನು ಬಿಂಬಿಸುವ ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು, ಕಂದಾಯ ಇಲಾಖೆಯ ಜನಪರ ಯೋಜನೆಗಳು ಹಾಗೂ ಸೌಲಭ್ಯಗಳ ವಿತರಣೆಯ ಮಾಹಿತಿಯನ್ನು ಒಳಗೊಂಡ ಬೃಹತ್ ವಸ್ತುಪ್ರದರ್ಶನವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿತ್ತು.
ಸಚಿವರುಗಳಾದ ಕೆ.ಹೆಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಿಕಿಹೊಳಿ, ಬಿ.ಝೆಡ್. ಜಮೀರ್ ಅಹಮದ್ ಖಾನ್, ಈಶ್ವರ ಖಂಡ್ರೆ, ಆರ್.ಬಿ.ತಿಮ್ಮಾಪುರ, ಕೆ.ವೆಂಕಟೇಶ್, ಶಿವಾರಾಜ್ ತಂಗಡಗಿ, ಸುರೇಶ್ ಬಿ.ಎಸ್. ಲಕ್ಷ್ಮೀ ಹೆಬ್ಬಾಳ್ಕರ್, ಮಂಕಾಳ ಎಸ್.ವೈದ್ಯ, ಮಧು ಬಂಗಾರಪ್ಪ, ಡಾ.ಎಂ.ಸಿ.ಸುಧಾಕರ್, ಎನ್.ಎಸ್.ಬೋಸರಾಜು, ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್ ಹಾಗೂ ಶಾಸಕರುಗಳು, ಸರ್ಕಾರದ ಅಪರ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಸಿಇಒ ಬಿ.ವಿ.ಅಶ್ವಿಜ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
