ತುಮಕೂರು -ತಿಪಟೂರು -ಆಲದಮರ ದುರಂತ
ತಿಪಟೂರು: ಭಾರಿ ಮಳೆಗೆ ರಸ್ತೆ ಮಧ್ಯೆ ಧರೆಗುರುಳಿದ ಬೃಹತ್ ಆಲದಮರ.
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಮಾಜಿ ಸಚಿವ ಮುರುಗೇಶ್ ನಿರಾಣಿ ಬೀಗರು
ರಾಜ್ಯದಲ್ಲಿ ರೋಹಿಣಿ ಮಳೆಯ ಆರ್ಭಟ ಜೋರಾಗಿದೆ. ತಿಪಟೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆ ಮಧ್ಯದಲ್ಲಿದ್ದ ಬೃಹತ್ ಆಲದಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆಯೇ ಧರೆಗುರುಳಿದೆ. ಇನ್ನು ಕಾರಿನಲ್ಲಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಬೀಗರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಿಪಟೂರು-ಹುಳಿಯಾರು ರಸ್ತೆಯ ಬೈರನಾಯಕನಹಳ್ಳಿ ಕಣಿವೆ ಬಳಿ ಈ ಘಟನೆ ನಡೆದಿದೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಬೀಗರು ಹಾಗೂ ತಿಪಟೂರು ರೋಟರಿ ಟ್ರಸ್ಟ್ ಅಧ್ಯಕ್ಷರಾಗಿರುವ ಬಿ.ಸಿ. ಪ್ರಭುಸ್ವಾಮಿ ಅವರು ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ರೋಹಿಣಿ ಮಳೆಯ ತೀವ್ರತೆಗೆ ರಸ್ತೆ ಬದಿಯಲ್ಲಿದ್ದ ಬೃಹತ್ ಆಲದಮರ ಏಕಾಏಕಿಯಾಗಿ ಕಾರಿನ ಮೇಲೆಯೇ ಬಿದ್ದಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದರೂ, ಅದೃಷ್ಟವಶಾತ್ ಬಿ.ಸಿ. ಪ್ರಭುಸ್ವಾಮಿ ಅವರು ಯಾವುದೇ ಸಣ್ಣ-ಪುಟ್ಟ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಮುಖ್ಯ ರಸ್ತೆಯಲ್ಲೇ ಬೃಹತ್ ಮರ ಬಿದ್ದಿದ್ದರಿಂದ ತಿಪಟೂರು-ಹುಳಿಯಾರ್ ರಸ್ತೆಯ ಉದ್ದಕ್ಕೂ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಿಪಟೂರು ಪೊಲೀಸರು, ಬೆಸ್ಕಾಂ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮರವನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
