ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ನ್ಯಾಯವಾದಿ ಅಲೋಕ್ ಕುಮಾರ್ ಅವರ ಭೇಟಿ !
“ಮುಂದಿನ 10 ವರ್ಷಗಳಲ್ಲಿ ಕಾಶಿ ಮತ್ತು ಮಥುರಾ ಮುಕ್ತವಾಗಲಿವೆ !” – ಅಧಿವಕ್ತಾ ಅಲೋಕ್ ಕುಮಾರ್,
ಅಂತರಾಷ್ಟ್ರೀಯ ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್.
ಫೋಂಡಾ (ಗೋವಾ): ಕಾಶಿ ಮತ್ತು ಮಥುರಾದಂತಹ ಧಾರ್ಮಿಕ ಸ್ಥಳಗಳ ಸತ್ಯ ಮತ್ತು ಪುರಾವೆಗಳು ಹಿಂದೂಗಳ ಪರವಾಗಿವೆ. ಈ ಕುರಿತು ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿದೆ. ಒಬ್ಬ ವಕೀಲನಾಗಿ ನಾನು ಹೇಳುವುದೇನೆಂದರೆ, ಅಯೋಧ್ಯೆಯ ಶ್ರೀರಾಮ ಮಂದಿರವು ಹೇಗೆ ಮುಕ್ತವಾಯಿತೋ, ಅದೇ ರೀತಿ ಮುಂಬರುವ 10 ವರ್ಷಗಳಲ್ಲಿ ಕಾಶಿ ಮತ್ತು ಮಥುರಾ ಕೂಡ ಮುಕ್ತವಾಗಲಿವೆ ಎಂದು ವಿಶ್ವ ಹಿಂದೂ ಪರಿಷತ್ತಿನ (ವಿಹಿಂಪ) ಅಂತರಾಷ್ಟ್ರೀಯ ಅಧ್ಯಕ್ಷರಾದ ಅಧಿವಕ್ತಾ ಅಲೋಕ್ ಕುಮಾರ್ ಅವರು ಪ್ರತಿಪಾದಿಸಿದರು.ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ವಿಹಿಂಪನ ‘ಸಂತ ದರ್ಶನ ಮತ್ತು ಸಂವಾದ’ ಉಪಕ್ರಮದ ಅಡಿಯಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಬರುವ ಶತಮಾನ ಹಿಂದೂಗಳದ್ದಾಗಿರಲಿದೆ!
ಅಧಿವಕ್ತಾ ಅಲೋಕ್ ಕುಮಾರ್ ಅವರು ಮುಂದುವರಿದು ಮಾತನಾಡುತ್ತಾ, “ಬರುವ ಶತಮಾನವು ಹಿಂದೂಗಳದ್ದಾಗಿರಲಿದೆ. ಈ ಹಿಂದೆ ರಷ್ಯಾ ಮತ್ತು ಈಗ ಅಮೆರಿಕದ ಪ್ರಭಾವವಿತ್ತು; ಆದರೆ ಅದು ಈಗ ಕ್ಷೀಣಿಸುತ್ತಿದೆ. ಯಾವುದೇ ಶತಮಾನದ ಬದಲಾವಣೆಯು 30 ರಿಂದ 40 ನೇ ದಶಕದ ಸುಮಾರಿಗೆ ಸಂಭವಿಸುತ್ತದೆ. ಅದರಂತೆ ಈಗ ಬರಲಿರುವ ಶತಮಾನವು ಹಿಂದೂಗಳ ಮತ್ತು ಭಾರತದ ಶತಮಾನವಾಗಲಿದೆ. ಅದರ ಚಿತ್ರಣವು ಈಗಾಗಲೇ ಕಂಡುಬರುತ್ತಿದೆ. ದೇಶಾದ್ಯಂತ ಎಲ್ಲಾ ಸಣ್ಣ-ದೊಡ್ಡ ಹಿಂದೂ ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ಹಿಂದೂ ಧರ್ಮಕ್ಕಾಗಿ ಕಾರ್ಯನಿರ್ವಹಿಸುತ್ತಿವೆ. ವಿಹಿಂಪ ವತಿಯಿಂದಲೂ ‘ಘರ್ ವಾಪಸಿ’ ಕಾರ್ಯವು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಪ್ರಸ್ತುತ ಕುಟುಂಬಗಳಲ್ಲಿ ಹಳೆಯ ಸಂಸ್ಕಾರಗಳು ದೊರೆಯದ ಕಾರಣ ಮತ್ತು ಸದಸ್ಯರ ನಡುವಿನ ಸಂವಹನ ಕಡಿಮೆಯಾಗುತ್ತಿರುವುದರಿಂದ ಕೌಟುಂಬಿಕ ಹಾನಿಯಾಗುತ್ತಿದೆ. ಇದನ್ನು ಮನಗಂಡು ವಿಹಿಂಪ ಕೌಟುಂಬಿಕ ಸಂವಾದಕ್ಕಾಗಿ ವಿವಿಧ ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನಾವು ವೇದಗಳ ಪ್ರಚಾರವನ್ನೂ ಮಾಡುತ್ತಿದ್ದೇವೆ,” ಎಂದರು.
ವಿಹಿಂಪದ ಕಾರ್ಯವು ಸ್ಥೂಲವಾಗಿದ್ದರೆ, ಸನಾತನದ ಕಾರ್ಯವು ಸೂಕ್ಷ್ಮವಾದುದು !
“ಸೂಕ್ಷ್ಮ ಜಗತ್ತಿನ ಅಧ್ಯಯನ ಮತ್ತು ಮಾರ್ಗದರ್ಶನ ಮಾಡುವುದು ಸನಾತನ ಸಂಸ್ಥೆಯ ವೈಶಿಷ್ಟ್ಯವಾಗಿದೆ. ಈ ಕಾರ್ಯವನ್ನು ಮಾಡುತ್ತಾ ಪರಬ್ರಹ್ಮನೊಂದಿಗೆ ಏಕರೂಪವಾಗುವ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ವಿಶ್ವ ಹಿಂದೂ ಪರಿಷತ್ ಪ್ರತ್ಯಕ್ಷ ಜಗತ್ತಿನಲ್ಲಿ ಕಾರ್ಯನಿರ್ವಹಿಸುವ ಸಂಘಟನೆಯಾದರೆ, ಸನಾತನ ಸಂಸ್ಥೆಯ ಕಾರ್ಯವು ಆಧ್ಯಾತ್ಮಿಕ (ಸೂಕ್ಷ್ಮ) ಜಗತ್ತಿಗೆ ಸಂಬಂಧಿಸಿದೆ,” ಎಂದು ಅಲೋಕ್ ಕುಮಾರ್ ಅವರು ಸನಾತನ ಸಂಸ್ಥೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವಿಹಿಂಪ ಕೊಂಕಣ ಪ್ರಾಂತದ ಮುಖ್ಯಸ್ಥರಾದ ಶ್ರೀ. ಪರಶುರಾಮ್ ದುಬೆ, ಗೋವಾ ಮುಖ್ಯಸ್ಥ ಶ್ರೀ. ಪ್ರವಾಸ್ ನಾಯ್ಕ್, ವಿಭಾಗ ಮಂತ್ರಿ ಶ್ರೀ. ಮೋಹನ್ ಆಮ್ಶೇಕರ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಧಾರ್ಮಿಕ ವಿಭಾಗದ ಮುಖ್ಯಸ್ಥ ಶ್ರೀ. ಸಂಜಯ್ ಮುರ್ದಾಳೆ, ಸನಾತನ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಶ್ರೀ. ವೀರೇಂದ್ರ ಮರಾಠೆ, ಸನಾತನದ ಸಂತರಾದ ಪೂಜ್ಯ ಪೃಥ್ವಿರಾಜ್ ಹಜಾರೆ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ್ ರಾಜಹಂಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಶ್ರೀ. ರಾಜಹಂಸ್ ಅವರು ಅಲೋಕ್ ಕುಮಾರ್ ಅವರಿಗೆ ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮದ ಕಾರ್ಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ. ವೀರೇಂದ್ರ ಮರಾಠೆ ಅವರು ಅಧಿವಕ್ತಾ ಅಲೋಕ್ ಕುಮಾರ್ ಅವರಿಗೆ ಶಾಲು ಹೊದಿಸಿ, ಶ್ರೀಫಲ ಮತ್ತು ಸನಾತನದ ಗ್ರಂಥಗಳನ್ನು ನೀಡಿ ಗೌರವಿಸಿದರು. ಇದರೊಂದಿಗೆ ಇತರ ಗಣ್ಯರನ್ನೂ ಸತ್ಕರಿಸಲಾಯಿತು. ಈ ಸಮಾರಂಭದಲ್ಲಿ ಗೋವಾದ ಚಿನ್ಮಯ ಮಿಷನ್ ಮುಖ್ಯಸ್ಥರಾದ ಸ್ವಾಮಿ ಸುಘೋಷಾನಂದ ಮತ್ತು ವಿಹಿಂಪದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
