*ಗ್ರಾಮೀಣಭಾಗದ 24 ಕುಟುಂಬದ ವಿಕಲಚೇತನರ ಬಂಗಾರದ ಬದುಕಿನ ದಿನ*
*ಅಜೂರ್ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ*
*ಪರಮ ಪೂಜ್ಯ ಡಾ.* *ಜಪಾನಂದ ಜೀ ಮಹಾರಾಜ್*
ದಿನಾಂಕ: 6-3-2026
ಶ್ರೀ ರಾಮಕೃಷ್ಣ ಸೇವಾಶ್ರಮ, ಶ್ರೀ ಶಾರದಾದೇವಿ ದೃಷ್ಟಿ ನಿರ್ವಹಣಾ ಸಂಸ್ಥೆ, ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಪಾವಗಡ ಮತ್ತು ಚೆಷೈರ್ ಡಿಸೆಬಿಲಿಟಿ ಟ್ರಸ್ಟ್ (ರಿ), ಬೆಂಗಳೂರು ಹಾಗೂ ಯೋಜನೆಯ ಪ್ರಾಯೋಜಕರಾದ ಅಜೂರ್ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರುಗಳ ಸಹಕಾರದೊಂದಿಗೆ ವಿಕಲಚೇತನರಿಗೆ ಸ್ವಯಂ ಉದ್ಯೋಗ ವ್ಯಾಪಾರ ಕಿಟ್ ವಿತರಣಾ ಕಾರ್ಯಕ್ರಮದ ವರದಿ.
ಇದೇ ತಾ.6-3-2026ರ ಶುಕ್ರವಾರದಂದು ಬೆಳಿಗ್ಗೆ 11 ಗಂಟೆಗೆ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಪಾವಗಡ ತ್ತಾಲ್ಲೂಕಿನ ಆಯ್ದ 24 ವಿಕಲಚೇತನ ವ್ಯಕ್ತಿಗಳಿಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸ್ವಯಂ ಉದ್ಯೋಗ ವ್ಯಾಪಾರ ಕಿಟ್ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮತ್ ಸ್ವಾಮಿ ಜಪಾನಂದಜೀ ಮಹಾರಾಜ್, ಅಧ್ಯಕ್ಷರು, ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ ಇವರು ವಹಿಸಿದ್ದರು. ಉದ್ಘಾಟನೆಯನ್ನು ಶ್ರೀ ಮುರಳೀಧರ ಹಾಲಪ್ಪ, ಅಧ್ಯಕ್ಷರು, ಹಾಲಪ್ಪ ಪ್ರತಿಷ್ಠಾನ, ತುಮಕೂರು ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಗಾಯಿತ್ರಿ ರವೀಶ್, ತಾಂತ್ರಿಕ ಸಲಹೆಗಾರರು, ಚೆಷೈರ್ ಡಿಸಬಿಲಿಟಿ ಟ್ರಸ್ಟ್, ತುಮಕೂರು, ಡಾ.ಚಂದ್ರಕಲಾ ಜಿ.ಆರ್., ಮುಖ್ಯ ವೈದ್ಯಾಧಿಕಾರಿಗಳು, ಶ್ರೀಮತಿ ಕೆ.ಶೋಭಾ, ಆಡಳಿತಾಧಿಕಾರಿಗಳು, ಸ್ವಾಮಿ ವಿವೇಕಾನಂದ ಆಸ್ಪತ್ರೆ ರವರು ಹಾಗೂ ಎಂ.ಆರ್.ಡಬ್ಲ್ಯೂ. ಶ್ರೀ ಮೈಲಾರಪ್ಪ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಬಿ.ಕೆ.ನಟರಾಜ್ ರವರು, ಯೋಜನಾಧಿಕಾರಿಗಳು, ನಡೆಸಿಕೊಟ್ಟರು. ಚೆಷೈರ್ ಡಿಸಬಿಲಿಟಿ ಟ್ರಸ್ಟ್ನ ಶ್ರೀ ಮಾರುತಿ ಪ್ರಸನ್ನ ಹಾಗೂ ಶ್ರೀ ಅವಿನಾಶ್ ರವರು ಹಾಜರಿದ್ದರು.
ಆಶೀರ್ವಚನ ನೀಡಿದ ಶ್ರೀಮತ್ ಸ್ವಾಮಿ ಜಪಾನಂದಜೀ ರವರು ಸ್ವಂತ ವ್ಯಾಪಾರದ ಕಿಟ್ಗಳನ್ನು ಸ್ವೀಕರಿಸುವ ನೀವು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವತಂತ್ರರಾಗಬೇಕು ಎಂದು ತಿಳಿ ಹೇಳಿದರು. ನಾವು ಮತ್ತು ಸಿ.ಡಿ.ಟಿ. ರವರು ಆಗಾಗ ನಿಮ್ಮ ಪ್ರಗತಿ ಪರಿಶೀಲನೆಯನ್ನು ಮಾಡುತ್ತೇವೆ, ಉತ್ತಮ ಫಲಿತಾಂಶ ಬಂದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಾಯವನ್ನು ಮಾಡುತ್ತೇವೆ ಎಂದು ತಿಳಿಸಿದರು. ಕಳೆದ ಮೂರು ತಿಂಗಳಿನಿಂದ ಆಯ್ದ ವಿಕಲಚೇತನರಿಗೆ ಶ್ರೀ ಶಾರದಾದೇವಿ ದೃಷ್ಟಿ ನಿರ್ವಹಣಾ ಸಂಸ್ಥೆಯಲ್ಲಿ ತರಬೇತಿಯನ್ನು ನೀಡಲಾಗಿದ್ದು, ಅದರಲ್ಲಿ ಆಯ್ದ 24 ಜನ ಫಲಾನುಭವಿಗಳ ಮೌಲ್ಯಮಾಪನವನ್ನು ತಜ್ಞರು ನಡೆಸಿದ್ದಾರೆ. ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಅವರ ಕುಟುಂಬದ ಹಿನ್ನೆಲೆ, ಆರ್ಥಿಕ ಸ್ಥಿತಿ, ಹಿನ್ನೆಲೆ, ಇರುವ ಕೌಶಲ್ಯಗಳು ಮತ್ತು ಆಸಕ್ತಿ ಮಟ್ಟವನ್ನು ತಿಳಿದುಕೊಂಡು, ಈಗಾಗಲೇ ಆದಾಯ ಚಟುವಟಿಕೆ ನಡೆಸುತ್ತಿರುವವರ ಸಣ್ಣ ವ್ಯಾಪಾರ ಸ್ಥಳಗಳಿಗೂ ಭೇಟಿ ನೀಡಲಾಗಿದೆ. ಈ ರೀತಿ ಆಯ್ಕೆಯಾದ ವಿಕಲಚೇತನರಿಗೆ ಇಂದು ನಿಮ್ಮ ಅಗತ್ಯಕ್ಕೆ ತಕ್ಕಂತೆ ದಿನಸಿ ಪದಾರ್ಥಗಳು, ಮೂರು ಹೊಲಿಗೆ ಯಂತ್ರಗಳು, ಮೋಟಾರ್ ಬೈಕ್ ಸರ್ವೀಸ್ ಕಿಟ್, ಆರು ರೆಫ್ರಿಜರೇಟರ್, ಪೋಟೋ ಪ್ರಿಂಟರ್ ಕಿಟ್, ಸಲೂನ್ ಕಿಟ್, ಬೈಕ್ ವಾಷಿಂಗ್ ಯಂತ್ರ, ಎರಡು ತಳ್ಳುವ ಗಾಡಿಗಳು, ಮೂರು ಜೊತೆ ಪ್ಲಾಸ್ಟಿಕ್ ಹೂ ತಯಾರಿಸಲು ಪೂರಕ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ, ಇವುಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಉದ್ಘಾಟನಾ ಭಾಷಣ ಮಾಡಿದ ಶ್ರೀ ಮುರಳೀಧರ ಹಾಲಪ್ಪ ನವರು ಗ್ರಾಮಾಂತರ ಪ್ರದೇಶಗಳಲ್ಲಿ ಈ ತರಹದ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚಾಗಿ ನಡೆದಲ್ಲಿ ಗ್ರಾಮಾಭಿವೃದ್ಧಿಗೆ ಅದರಲ್ಲೂ ವಿಕಲಚೇತನರಿಗೆ ಹೆಚ್ಚಿನ ಸಹಾಯವಾಗುವುದು ಎಂದು ತಿಳಿಸಿದರು. ಪೂಜ್ಯ ಸ್ವಾಮಿ ಜಪಾನಂದಜೀ ರವರ ನೇತೃತ್ವದಲ್ಲಿ ಸದಾ ಒಂದಲ್ಲಾ ಒಂದು ರೀತಿಯ ಜನಪರ ಕಾರ್ಯಕ್ರಮಗಳು ಅದರಲ್ಲೂ ಮುಖ್ಯವಾಗಿ ವಿಕಲಚೇತನರಿಗೆ ಹಾಗೂ ದೃಷ್ಟಿ ದೋಷವುಳ್ಳವರಿಗೆ ಅನೇಕ ರೀತಿಯ ಸಹಾಯ ಹಸ್ತಗಳನ್ನು ನೀಡುತ್ತಾ ಬಂದಿರುವುದು ಗಮನಾರ್ಹ. ಈ ಸಂದರ್ಭದಲ್ಲಿ ಈ ದಿನ ಸರಿಸುಮಾರು 24 ಜನರಿಗೆ ನಾನಾ ರೀತಿಯ ಸ್ವಯಂ ಉದ್ಯೋಗದ ಹಿನ್ನೆಲೆಯಲ್ಲಿ ಸಹಾಯಹಸ್ತ ನೀಡುತ್ತಿರುವುದು ನಿಜಕ್ಕೂ ಈ ಮೂರು ಸಂಸ್ಥೆಗಳ ಸಹಕಾರದಿಂದ 24 ಜನರ ಜೀವನ ಶಾಶ್ವತವಾಗಿ ಉದ್ದಾರವಾಗುವುದರಲ್ಲಿ ಸಂದೇಹವಿಲ್ಲ ಎಂದು ಶ್ಲಾಘಿಸಿದರು.
ಅಧ್ಯಕ್ಷೀಯ ನುಡಿ ನುಡಿದ ಶ್ರೀಮತಿ ಗಾಯತ್ರಿ ರವೀಶ್ ರವರು ಈ ರೀತಿಯ ಸ್ವಯಂ ಉದ್ಯೋಗ ಕಿಟ್ಗಳ ವಿತರಣೆಯ ಉದ್ದೇಶ ವಿಕಲಚೇತನರು ತಾವಿರುವ ಸ್ಥಳಗಳಲ್ಲಿ ಆರ್ಥಿಕವಾಗಿ ಸದೃಢವಾಗಿ ಮುಂದುವರೆಯುವಂತಾಗುವುದು, ಆ ಮೂಲಕ ಇನ್ನೂ ಅನೇಕ ವಿಕಲಚೇತನರಿಗೆ ನೀವುಗಳು ಮಾದರಿಯಾಗಬೇಕೆಂದು ತಿಳಿಸಿದರು. ವಿಕಲಚೇತನರಿಗಾಗಿ ಹಮ್ಮಿಕೊಂಡಿರುವ ಚೆಷೈರ್ ಡಿಸಬಿಲಿಟಿ ಟ್ರಸ್ಟ್ನ ಕಾರ್ಯಕ್ರಮಗಳನ್ನು ಸಭೆಯಲ್ಲಿ ವಿವರವಾಗಿ ತಿಳಿಸಿ ಇಂದಿನ ಯೋಜನೆಗೆ ಸರ್ವ ರೀತಿಯಲ್ಲಿ ಸಹಕಾರ ನೀಡಿ ಮಾರ್ಗದರ್ಶನ ನೀಡಿದ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಹಾಗೂ ಪ್ರಾಯೋಜಕರಾಗಿರುವ ಅಜೂರ್ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೂ ತಮ್ಮ ಧನ್ಯವಾದಗಳನ್ನು ತಿಳಿಸಿ ಮುಂದೆಯೂ ಸಹ ನಾನಾ ರೀತಿಯ ಕಾರ್ಯ ಯೋಜನೆಗಳನ್ನು ಪೂಜ್ಯ ಸ್ವಾಮಿ ಜಪಾನಂದಜೀ ರವರ ಮಾರ್ಗದರ್ಶನದಲ್ಲಿ ಕೈಗೊಳ್ಳುವುದಾಗಿ ತಿಳಿಸಿದರು.
ವರದಿ-ನಾಗರಾಜು ಹಿರಿಯ ಪತ್ರಕರ್ತರು
