ತುಮಕೂರು ವಿವಿಯಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಎಂ. ಎಸ್. ಡಬ್ಲ್ಯೂ. ವಿದ್ಯಾರ್ಥಿ ಮಂಜುನಾಥ ಸಿ. ಅವರ ಪುಸ್ತಕವನ್ನು ಬೆಂಗಳೂರು ಮೊಬಿಲಿಟಿ ಇಂಡಿಯಾದ ಕಾರ್ಯಕಾರಿ ನಿರ್ದೇಶಕರಾದ ಅಲ್ಬಿನಾ ಶಂಕರ್ ಬಿಡುಗಡೆ ಮಾಡಿದರು. ಪ್ರೊ. ಪರಶುರಾಮ ಕೆ. ಜಿ, ಚಿತ್ತಯ್ಯ, ಡಾ.ಎಸ್. ಸಿದ್ದರಾಮಣ್ಣ, ಬಿ. ಎಸ್. ಚಿದಾನಂದ ಮೂರ್ತಿ, ಸಾ. ಚಿ. ರಾಜಕುಮಾರ್, ಆನಂದ ಎಸ್. ಎನ್. ಇದ್ದಾರೆ.
‘ಸಾಮಾಜಿಕ ಕಾರ್ಯಕರ್ತರು ಸಮಾಜದ ಕಣ್ಣುಗಳಾಗಬೇಕು’
ತುಮಕೂರು: ಸಮಸ್ಯೆಗಳು ಕಣ್ತುಂಬ ಕಾಣುತ್ತಿವೆ. ಆದರೆ ಕೆಲಸ ಮಾಡುವ ಕೈಗಳ ಸಂಖ್ಯೆ ಕಡಿಮೆ. ಸಾಮಾಜಿಕ ಕಾರ್ಯಕರ್ತರು ಸಮಾಜದ ಕಣ್ಣುಗಳಾಗಬೇಕೆಂದು ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ಪರಶುರಾಮ ಕೆ.ಜಿ. ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಮೊಬಿಲಿಟಿ ಇಂಡಿಯಾ ಇವರ ಸಹಯೋಗದೊಂದಿಗೆ ಸೋಮವಾರ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಮಾತನಾಡಿದರು.
ತುಮಕೂರು ಜಿಲ್ಲೆಯಲ್ಲಿ ೪೬ ಸಾವಿರ ಕುಟುಂಬಗಳು ಮತ್ತು ರಾಜ್ಯದಲ್ಲಿ ೧೧ ಲಕ್ಷಕ್ಕೂ ಹೆಚ್ಚು ಕುಟುಂಬಗಳು ದೈಹಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇವರಿಗೆ ನಾವು ಮನೆಯಲ್ಲಿ ಸೂಕ್ತ ವಾತಾವರಣವನ್ನು ಕಲ್ಪಿಸಿ ಕೊಡಬೇಕೆಂದು ಹೇಳಿದರು.
ಮೊಬಿಲಿಟಿ ಇಂಡಿಯಾ ಕಾರ್ಯಕಾರಿ ನಿರ್ದೇಶಕರಾದ ಅಲ್ಬೀನಾ ಶಂಕರ್ ಮಾತನಾಡಿ, ವಿಕಲಚೇತನರ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಅಂತವರಿಗೆ ಒಳ್ಳೆಯ ಅವಕಾಶಗಳು ದೊರೆಯುತ್ತವೆ. ಸಾಕಷ್ಟು ವಿಕಲಚೇತನರು ಸಾಧನೆಗಳನ್ನು ಮಾಡಿರುವುದನ್ನು ಕಾಣಬಹುದು ಎಂದು ಹೇಳಿದರು.
ತುಮಕೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಸ್ ಸಿದ್ದರಾಮಣ್ಣ ಮಾತನಾಡಿ, ವಿಕಲಚೇತನ ವರವೂ ಅಲ್ಲ ಶಾಪವೂ ಅಲ್ಲ. ಅದೊಂದು ಸ್ಥಿತಿಯಾಗಿದೆ. ಆದರೆ ಈ ಬಗ್ಗೆ ಸಮಾಜದಲ್ಲಿ ತುಂಬ ತಪ್ಪು ಕಲ್ಪನೆಗಳಿವೆ. ಸಮಾಜಕಾರ್ಯ ವಿದ್ಯಾರ್ಥಿಗಳು ಸಮಾಜದಲ್ಲಿ ಅರಿವು ಮೂಡಿಸಬೇಕು ಎಂದರು.
ವರದಕ್ಷಿಣೆ ವಿರೋಧಿ ವೇದಿಕೆ ಕಾರ್ಯದರ್ಶಿ ಸಾ. ಚಿ. ರಾಜಕುಮಾರ, ಎಂ.ಆರ್.ಡಬ್ಲೂö್ಯ ಶಿರಾ ಜಿಲ್ಲಾಧ್ಯಕ್ಷ ಚಿತ್ತಯ್ಯ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಬಿ.ಎಸ್. ಚಿದಾನಂದಮೂರ್ತಿ, ಮೊಬಿಲಿಟಿ ಇಂಡಿಯಾದ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಮತ್ತಿತರರು ಉಪಸ್ಥಿತರಿದ್ದರು.
