*ಹೋರಾಟದ ಪ್ರತಿಫಲವಾಗಿ ಮತ್ತೆ ಮೊಳಗಿದ ಸರ್ಕಾರಿ ಶಾಲೆಗಳ ಗಂಟೆ! ಎಐಡಿಎಸ್ಓನಿಂದ ವಿದ್ಯಾರ್ಥಿಗಳಿಗೆ ಸ್ವಾಗತ!*
ತುಮಕೂರು-ಇಂದು ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಅಜ್ಜಾಯನಪಾಳ್ಯ, LH ಪಾಳ್ಯ, ಕುಂಟೆಗೌಡನಹಳ್ಳಿ, ಯಲದಬಾಗಿ, ನೆಲೆದಿಮ್ಮನಹಳ್ಳಿ, ನಾಗೇನಳ್ಳಿ, ಅಮಲಗುಂದಿ, ಅಗಳಕೋಟೆ, ಕುಂಕುಮನಹಳ್ಳಿ, ಕೊತ್ತಿಹಳ್ಳಿ, ಕುರಗುಂದ ಸೇರಿದಂತೆ ಹಲವಾರು ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಪೋಷಕರು ಹಾಗೂ ವಿದ್ಯಾರ್ಥಿಗಳು ಸೇರಿ ನಮ್ಮೂರ ಶಾಲೆ ‘ನಮ್ಮಯ ಕಣ್ಮಣಿ’ ಎಂಬ ಬ್ಯಾನರ್ ಹಿಡಿದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಕಪ್ಪ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿ, “ನಮ್ಮ ದೇಶದಲ್ಲಿ ಎಲ್ಲರಿಗೂ ಶಿಕ್ಷಣ ದೊರೆಯಬೇಕೆಂದು ಜ್ಯೋತಿಬಾಪುಲೆ ಸಾವಿತ್ರಿಬಾಯಿ ಪುಲೆ ಈಶ್ವರ ಚಂದ್ರ ವಿದ್ಯಾಸಾಗರ್ ಪಂಡಿತ್ ಮುಂತಾದವರು ಶ್ರಮಿಸಿದರು. ಅವರ ಹೋರಾಟದ ಫಲವಾಗಿ ಇಂದು ಎಲ್ಲರಿಗೂ ಶಿಕ್ಷಣ ದೊರೆಯುತ್ತಿದೆ. ಆದರೆ ಶಿಕ್ಷಣವನ್ನು ಎಲ್ಲರಿಗೂ ಖಾತ್ರಿ ಪಡಿಸಬೇಕಿದ್ದ ಸರ್ಕಾರವೇ ಇಂದು ಶಾಲೆಗಳನ್ನು ಮುಚ್ಚುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸಾವಿರಾರು ಶಾಲೆಗಳನ್ನು ಮುಚ್ಚಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ 1800ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಮುಂದಾಗಿದ್ದರು. ಆದರೆ ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ನಡೆದ ತೀವ್ರ ಹೋರಾಟದ ಪ್ರತಿಫಲವಾಗಿ ಇಂದು ಶಾಲೆಗಳಲ್ಲಿ ಮತ್ತೆ ಗಂಟೆ ಮೊಳಗುತ್ತಿದೆ, ಎಂದು ಹೇಳಿ ಎಲ್ಲ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ತುಮಕೂರು ಜಿಲ್ಲಾಉಪಾಧ್ಯಕ್ಷರಾದ ರತ್ನಮ್ಮ ಮಾತನಾಡಿ, ಹೋರಾಟದಿಂದಾಗಿ ನಮ್ಮೂರಿನ ಶಾಲೆಗಳು ಉಳಿದಿವೆ. ಮುಂದೆ ಈ ಶಾಲೆಗಳು ವಿಲೀನಗೊಳ್ಳದಂತೆ ರಕ್ಷಿಸಿ ಬಲಪಡಿಸುವ ನಮ್ಮ ಸಂಘಟಿತ ಪ್ರಯತ್ನ ಮುಂದುವರಿಯುತ್ತದೆ. ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓನ ಸೈಯದ್, ಭರತ್ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಮಂಜುಳ, ಶಿವಪ್ರಕಾಶ ಮಮತಾ, ಪೋಷಕರಾದ ರಮೇಶ್, ರೇಣುಕಾ, ಅಮೀರ್ ಮುಂತಾದ ಪಾಲಕರು ಮಕ್ಕಳು ಉಪಸ್ಥಿತರಿದ್ದರು.
ವರದಿ : ಬಾಬುಖಾನ್ .ತುಮಕೂರು
