ಎಸ್ಐಆರ್ ನೋಟಿಸ್ ಪಡೆದ ವೃದ್ಧರು, ವಿಶೇಷಚೇತನರು, ರೋಗಿಗಳು ಹಾಗೂ ಎನ್ಆರ್ಐಗಳಿಗೆ ನೇರ ಹಾಜರಾತಿಯಿಂದ ವಿನಾಯಿತಿ ನೀಡಿ
ನೋಟಿಸ್ ಅವಧಿಯನ್ನು ಕನಿಷ್ಠ ಮೂರು ತಿಂಗಳಿಗೆ ವಿಸ್ತರಿಸಿ: ಎಪಿಸಿಆರ್ ಆಗ್ರಹ
ತುಮಕೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ವೃದ್ಧರು, ವಿಶೇಷಚೇತನರು, ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ವಿದೇಶಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯ (NRI) ಮತದಾರರಿಗೆ ನೇರ ಹಾಜರಾತಿಯಿಂದ ವಿನಾಯಿತಿ ನೀಡಿ, ಅವರ ಕುಟುಂಬದ ಸದಸ್ಯರು ಅಥವಾ ಅಧಿಕೃತ ಪ್ರತಿನಿಧಿಗಳ ಮೂಲಕ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಆಗ್ರಹಿಸಿದೆ.
ಎಸ್ಐಆರ್ ಪ್ರಕ್ರಿಯೆಯ ಎರಡನೇ ಹಂತದಲ್ಲಿ ತಾರ್ಕಿಕ ವ್ಯತ್ಯಾಸ, ಹೆಸರು, ವಯಸ್ಸು, ಲಿಂಗ ಅಥವಾ 2002ರ ಮತದಾರರ ಪಟ್ಟಿಯ ಮಾಹಿತಿಯೊಂದಿಗೆ ಹೊಂದಾಣಿಕೆಯಾಗದ ಕಾರಣಕ್ಕಾಗಿ 43,81,143 ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ನೋಟಿಸ್ ಪಡೆದವರು ಅಗತ್ಯ ದಾಖಲೆಗಳೊಂದಿಗೆ ERO/AERO ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿದೆ. ನೋಟಿಸ್ ವಿಚಾರಣೆಗೆ ಅಕ್ಟೋಬರ್ 12 ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ, ಅಲ್ಪಾವಧಿಯಲ್ಲಿ ದಾಖಲೆಗಳನ್ನು ಸಂಗ್ರಹಿಸಿ ನೇರವಾಗಿ ಹಾಜರಾಗಬೇಕಾದ ಪರಿಸ್ಥಿತಿ ಅನೇಕ ಮತದಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು APCR ತಿಳಿಸಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಅಗತ್ಯವಾದ ಪ್ರಕ್ರಿಯೆಯಾಗಿದ್ದರೂ, ಅದರ ಹೆಸರಿನಲ್ಲಿ ಯಾವುದೇ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ವಿಶೇಷವಾಗಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರು, ವಿಶೇಷಚೇತನರು, ಹಾಸಿಗೆ ಹಿಡಿದಿರುವ ರೋಗಿಗಳು ಹಾಗೂ ಚಲನವಲನಕ್ಕೆ ಅಸಮರ್ಥರಾಗಿರುವವರಿಗೆ ಕಚೇರಿಗೆ ನೇರವಾಗಿ ತೆರಳಿ ಹಾಜರಾಗುವಂತೆ ಒತ್ತಾಯಿಸುವುದು ಅನಗತ್ಯ ಕಷ್ಟಕ್ಕೆ ಕಾರಣವಾಗುತ್ತದೆ. ಇಂತಹ ಮತದಾರರಿಗೆ ಅವರ ಕುಟುಂಬದ ಸದಸ್ಯರು ಅಥವಾ ಅಧಿಕೃತ ಪ್ರತಿನಿಧಿಗಳ ಮೂಲಕ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಸಂಘಟನೆಯ ತಾಜುದ್ದೀನ್ ಷರೀಫ್ ಹಾಗೂ ಕಾರ್ಯದರ್ಶಿ ಅಫ್ಜಲ್ ಖಾನ್ ಒತ್ತಾಯಿಸಿದ್ದಾರೆ.
ಅದೇ ರೀತಿ, ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ವಿದೇಶಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯ (NRI) ಮತದಾರರು ಎಸ್ಐಆರ್ ನೋಟಿಸ್ಗೆ ಉತ್ತರಿಸಲು ಕರ್ನಾಟಕಕ್ಕೆ ನೇರವಾಗಿ ಬರುವುದು ಪ್ರಾಯೋಗಿಕವಾಗಿ ಕಷ್ಟಕರ ಮತ್ತು ದುಬಾರಿಯಾಗಿದೆ. ಆದ್ದರಿಂದ ಅರ್ಹ NRI ಮತದಾರರಿಗೆ ಆನ್ಲೈನ್ ಮೂಲಕ ಅಥವಾ ಅವರ ಕುಟುಂಬದ ಸದಸ್ಯರು/ಅಧಿಕೃತ ಪ್ರತಿನಿಧಿಗಳ ಮೂಲಕ ದಾಖಲೆಗಳನ್ನು ಸಲ್ಲಿಸುವ ಅವಕಾಶ ಕಲ್ಪಿಸಬೇಕು ಎಂದು APCR ಆಗ್ರಹಿಸಿದೆ.
ತೆಲಂಗಾಣದಲ್ಲಿ ಇದೇ ರೀತಿಯ ಸಮಸ್ಯೆ ಎದುರಿಸುತ್ತಿರುವ ವೃದ್ಧರು, ವಿಶೇಷಚೇತನರು, ರೋಗಿಗಳು ಹಾಗೂ ವಿದೇಶದಲ್ಲಿರುವ ಮತದಾರರಿಗೆ ನೇರ ಹಾಜರಾತಿಯಿಂದ ವಿನಾಯಿತಿ ನೀಡುವ ಕುರಿತು ಚುನಾವಣಾ ಅಧಿಕಾರಿಗಳು ಕೈಗೊಂಡಿರುವ ಮತದಾರ ಸ್ನೇಹಿ ಕ್ರಮವನ್ನು ಕರ್ನಾಟಕದಲ್ಲಿಯೂ ಜಾರಿಗೆ ತರಬೇಕು. ನಾಗರಿಕರ ವಯಸ್ಸು, ದೈಹಿಕ ಸಾಮರ್ಥ್ಯ ಮತ್ತು ವಾಸಸ್ಥಳದ ಪರಿಸ್ಥಿತಿಯನ್ನು ಪರಿಗಣಿಸಿ ಪರ್ಯಾಯ ವಿಧಾನಗಳ ಮೂಲಕ ಎಸ್ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಸಂಘಟನೆಯು ತಹಶಿಲ್ದಾರಾದ ರಾಜೇಶ್ವರಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಎರಡು-ಮೂರು ದಿನಗಳ ಮುಂಚಿತವಾಗಿ ನೋಟಿಸ್ ನೀಡುತ್ತಿರುವುದು ಸಮಸ್ಯೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ನೋಟಿಸ್ ವಿಚಾರಣೆಗೆ ಕೇವಲ ಎರಡು ಅಥವಾ ಮೂರು ದಿನಗಳ ಮುಂಚಿತವಾಗಿ ನೋಟಿಸ್ ನೀಡಲಾಗುತ್ತಿದೆ. ಇದರಿಂದ ಅಲೆಮಾರಿ ಸಮುದಾಯಗಳು, ವಲಸೆ ಕಾರ್ಮಿಕರು ಹಾಗೂ ದೂರದ ಪ್ರದೇಶಗಳಲ್ಲಿ ಉದ್ಯೋಗದಲ್ಲಿರುವವರು ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ಅಲ್ಲದೆ, ಖಾಯಂ ವಾಸಸ್ಥಳ, ಜಾತಿ, ವಂಶಾವಳಿ ಸೇರಿದಂತೆ ಅಗತ್ಯ ಪ್ರಮಾಣಪತ್ರಗಳಿಗಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿರುವ ಅನೇಕ ನಾಗರಿಕರಿಗೆ ಇದುವರೆಗೆ ಪ್ರಮಾಣಪತ್ರಗಳು ದೊರೆತಿಲ್ಲ. ಇಂತಹವರಿಗೆ ಎರಡನೇ ಬಾರಿ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕು ಅಥವಾ ದಾಖಲೆಗಳನ್ನು ಸಲ್ಲಿಸಲು ಸಾಕಷ್ಟು ಕಾಲಾವಕಾಶ ನೀಡಬೇಕು ಎಂದು APCR ಆಗ್ರಹಿಸಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ನಿಖರವಾಗಿರುವುದರ ಜೊತೆಗೆ ನ್ಯಾಯಸಮ್ಮತ, ಪಾರದರ್ಶಕ, ಎಲ್ಲರನ್ನೂ ಒಳಗೊಂಡ ಮತ್ತು ನಾಗರಿಕ ಸ್ನೇಹಿಯಾಗಿರಬೇಕು. ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದ ಕಾರಣದಿಂದ ಒಬ್ಬ ಅರ್ಹ ನಾಗರಿಕನ ಹೆಸರೂ ಮತದಾರರ ಪಟ್ಟಿಯಿಂದ ಕೈಬಿಡಬಾರದು. ಆದ್ದರಿಂದ ನೋಟಿಸ್ಗೆ ಪ್ರತಿಕ್ರಿಯಿಸುವ ಅವಧಿಯನ್ನು ಕನಿಷ್ಠ ಮೂರು ತಿಂಗಳವರೆಗೆ ವಿಸ್ತರಿಸಬೇಕು ಎಂದು APCR ಒತ್ತಾಯಿಸಿದೆ.
ಯಾವುದೇ ಅರ್ಹ ನಾಗರಿಕರು ವಯಸ್ಸು, ಅಂಗವೈಕಲ್ಯ, ಅನಾರೋಗ್ಯ, ವಲಸೆ ಅಥವಾ ವಿದೇಶದಲ್ಲಿರುವ ಕಾರಣದಿಂದ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ಚುನಾವಣಾ ಆಯೋಗ ತುರ್ತು ಕ್ರಮ ಕೈಗೊಳ್ಳಬೇಕು. ತೆಲಂಗಾಣದ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮತದಾರ ಸ್ನೇಹಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು APCR ಆಗ್ರಹಿಸಿದೆ.
