ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನದ ಅಂಗವಾಗಿ
ವಿಶೇಷ ಕಾರ್ಯಕ್ರಮಗಳು
ತುಮಕೂರು: 1991ನೇ ಇಸವಿಯಿಂದಲೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಹಾಗೂ ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ, ಪಾವಗಡ ತಾಲ್ಲೂಕಿನಲ್ಲಿ ಹಾಗೂ ಸುತ್ತಮುತ್ತಲಿನ ಗಡಿ ಭಾಗದ ಪ್ರದೇಶಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮನವಿಯ ಮೇರೆಗೆ ಕುಷ್ಠ ರೋಗ ನಿರ್ಮೂಲನಾ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇದೀಗ ಈ ಯೋಜನೆಯು ಅತ್ಯಂತ ಯಶಸ್ವಿಯನ್ನು ಕಂಡಿದೆ. ರೋಗಿಗಳ ಸಾಂದ್ರತೆ ಶೇ. 1 ಕ್ಕಿಂತಲೂ ಕಡಿಮೆಯಾಗಿದ್ದು ಈ ಭಾಗ ಒಂದಾನೊಂದು ಕಾಲದಲ್ಲಿ ಕುಷ್ಠರೋಗ ಪೀಡಿತ ಪ್ರದೇಶ ಎಂದು ಆರೋಗ್ಯ ಇಲಾಖೆಯಲ್ಲಿ ನಮೂದಿಸಲ್ಪಟ್ಟಿತ್ತು. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಗ್ರಾಮಾಂತರ ಪ್ರದೇಶವಾದ ಪಾವಗಡ ಮತ್ತು ಸುತ್ತಮುತ್ತಲಿನ ಗಡಿ ಭಾಗದಲ್ಲಿ ನಿರಂತರವಾಗಿ ನಮ್ಮದೇ ಕಾರ್ಯಕರ್ತರನ್ನು ನೇಮಿಸಿಕೊಂಡು ಸರಿಸುಮಾರು 2002ನೇ ಇಸವಿಯವರೆಗೆ ಅಹರ್ನಿಷಿ ನಿರಂತರ ಕಾರ್ಯವನ್ನು ನಡೆಸಿದುದರ ಫಲವಾಗಿ ಇಂದು ಕುಷ್ಠರೋಗ ಮುಕ್ತ ಪ್ರದೇಶವಾಗುವತ್ತ ಮುಂದುವರಿಯುತ್ತಿದೆ. ಈ ಯೋಜನೆಗೆ ಡೇಮಿಯನ್ ಫೌಂಡೇಷನ್, ಬೆಲ್ಜಿಯಂ ಹಾಗೂ ಶ್ರೀ ರಾಮಕೃಷ್ಣ ಸೇವಾಶ್ರಮದ ಸಹಕಾರದಿಂದ ಅತ್ಯುತ್ತಮ ರೀತಿಯಲ್ಲಿ ಕುಷ್ಠರೋಗ ನಿರ್ಮೂಲನಾ ಯೋಜನೆಯು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಂತಹ ಸಂಸ್ಥೆಯಾಗಿದೆ. ಕುಷ್ಠರೋಗಿಗಳ ಸೇವೆ ಎಂದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆನಪು ಬಂದೇ ಬರುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಪ್ರಾರ್ಥನೆಯ ಮುನ್ನ ಪರಾಚರ ಶಾಸ್ತ್ರಿ ಎಂಬ ಕುಷ್ಠರೋಗಿಗೆ ಸೇವೆಯನ್ನು ಸಲ್ಲಿಸಿ ತದನಂತರ ತಮ್ಮ ಇತರ ಜವಾಬ್ದಾರಿಗಳನ್ನು ನಡೆಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಕಾರಣದಿಂದ ಪ್ರತೀ ವರ್ಷ ಅಕ್ಟೋಬರ್ 2 ಹಾಗೂ ಜನವರಿ 30 ಮಹಾತ್ಮ ಗಾಂಧೀಜಿಯವರ ನೆನಪಿನಲ್ಲಿ ದೇಶದ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ಕುಷ್ಠರೋಗದಿಂದ ಮುಕ್ತರಾಗಿರುವ ಜನರಿಗೆ ಹಾಗೂ ಅಲ್ಪ ಸ್ವಲ್ಪ ಉಳಿದಿರುವ ಕುಷ್ಠ ರೋಗಿಗಳಿಗೆ ಸೇವೆಯನ್ನು ಸಲ್ಲಿಸುವ ಮಹತ್ತರವಾದ ಸಂದರ್ಭ ಎಂದು ಭಾವಿಸಿ ಕಳೆದ 35 ವರ್ಷಗಳಿಗಿಂತಲೂ ಮಿಗಿಲಾಗಿ ಈ ಸೇವೆಯನ್ನು ಬೆಂಗಳೂರು, ತುಮಕೂರು, ಒಡಿಷಾ ರಾಜ್ಯದ ಪುರಿ ನಗರ, ಪಾವಗಡ, ಮಧುಗಿರಿ ಮುಂತಾದ ಪ್ರದೇಶಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈವರೆವಿಗೆ ಸರಿಸುಮಾರು 3915 ಕುಷ್ಠರೋಗಿಗಳನ್ನು ಪತ್ತೆ ಹಚ್ಚಿ ಸಂಪೂರ್ಣ ಉಚಿತವಾಗಿ ಔಷಧೋಪಚಾರಗಳು ಹಾಗೂ ಇತರ ಪರಿಕರಗಳನ್ನು ನೀಡಲಾಗಿದೆ. ಇಡೀ ರಾಜ್ಯದಲ್ಲಿಯೇ ಏಕೈಕ ಅಂಗವಿಕಲತೆಯ ಪುನರ್ ಜೋಡಣಾ ಶಸ್ತ್ರ ಚಿಕಿತ್ಸಾ ಕೇಂದ್ರ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಪಾವಗಡ ಆಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ ಸರಿ. ಈವರೆವಿಗೆ ಕರ್ನಾಟಕದ ಹಾಗೂ ಪಕ್ಕದ ಆಂಧ್ರಪ್ರದೇಶಕ್ಕೆ ಸೇರಿದ 662 ಅಂಗವಿಕಲ ಕುಷ್ಠರೋಗಿಗಳು ತಮ್ಮ ಅಂಗವಿಕಲತೆಯನ್ನು ಸಂಪೂರ್ಣವಾಗಿ ಸರಿಪಡಿಸಿಕೊಂಡು ಸಾಮಾನ್ಯರಂತೆ ಸಮಾಜದಲ್ಲಿ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಒಂದು ಮಹತ್ತರವಾದ ವಿಚಾರವನ್ನು ತಿಳಿಸಲು ಅತೀವ ಸಂತೋಷವಾಗುತ್ತದೆ. ಅದೇನೆಂದರೆ, ಪ್ರತಿಯೊಂದು ಈ ತೆರನಾದ ಅಂಗವಿಕಲತೆಯ ಪುನರ್ ಜೋಡಣಾ ಶಸ್ತ್ರ ಚಿಕಿತ್ಸೆ ಸರಿಸುಮಾರು ರೂ.1.25 ಲಕ್ಷದವರೆಗೂ ವೆಚ್ಚವಾಗುತ್ತದೆ. ಆದರೆ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಇವೆಲ್ಲವೂ ಉಚಿತವಾಗಿ ನೀಡುವುದಲ್ಲದೆ ಶಸ್ತ್ರ ಚಿಕಿತ್ಸೆಯ ಮುನ್ನ ಹಾಗೂ ನಂತರ ಎರಡು ತಿಂಗಳ ಅವಧಿಯಲ್ಲಿ ಚಿಕಿತ್ಸೆಗೆ ಒಳಗಾದವರ ಹಾಗೂ ಅವರ ಪರಿಚಾರಕರಿಗೆ ಪೂರ್ಣ ಉಚಿತವಾಗಿ ಊಟೋಪಚಾರಗಳು ಹಾಗೂ ಔಷಧಿಗಳನ್ನು ನೀಡುವಂತ ವ್ಯವಸ್ಥೆಯು ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ಈ ಬಾರಿ ತುಮಕೂರಿನಲ್ಲಿ ಸರ್ವೋದಯ ದಿನಾಚಾರಣೆಯನ್ನು ಆಚರಿಸುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕಾರ್ಯಕ್ರಮಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಕುಷ್ಠರೋಗಿಗಳು ಭಾಗವಹಿಸಿ ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ನೀಡುವ ನೂತನ ವಸ್ತ್ರ, ಹೊದಿಕೆ, ಸಾಧನ/ಸಲಕರೆಣೆಗಳು, ಪಾದರಕ್ಷೆ ಮುಂತಾದವುಗಳನ್ನು ಪಡೆಯಲು ಏರ್ಪಾಡು ಮಾಡಲಾಗಿದೆ.
ಈ ಕಾರ್ಯಕ್ರಮ ಜಿಲ್ಲಾ ಆಸ್ಪತ್ರೆಯ ಆಡಿಟೋರಿಯಂನಲ್ಲಿ ದಿನಾಂಕ: 30-1-2026ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮತ್ ಸ್ವಾಮಿ ಜಪಾನಂದಜೀ ಮಹಾರಾಜ್, ಅಧ್ಯಕ್ಷರು, ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಪಾವಗಡ ರವರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭಾ ಕಲ್ಯಾಣ್, ಐ.ಎ.ಎಸ್. ರವರು ನೆರವೇರಿಸುವರು. ಅಧ್ಯಕ್ಷತೆಯನ್ನು ಡಾ.ಚಂದ್ರಶೇಖರ್ ಬಿ.ಎಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ನ್ಯಾ. ನೂರ್ ಉನ್ನೀಸ, ಹಿರಿಯ ಸಿವಿಲ್ ನ್ಯಾಯಾಧೀಶರು, ತುಮಕೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಡಾ.ಅಸ್ಗರ್ ಬೇಗ್ ಸಿ.ಐ., ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ, ಶ್ರೀ ಮುರಳೀಧರ ಹಾಲಪ್ಪ, ಅಧ್ಯಕ್ಷರು, ಹಾಲಪ್ಪ ಪ್ರತಿಷ್ಠಾನ, ತುಮಕೂರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಉಪಸ್ಥಿತರಿರುತ್ತಾರೆ.
ಈ ಪತ್ರದೊಂದಿಗೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇರಿಸಲಾಗಿದೆ. ತಾವುಗಳು ತಮ್ಮ ಪತ್ರಿಕೆಯಲ್ಲಿ ಈ ವಿಚಾರವನ್ನು ಪ್ರಕಟಿಸಬೇಕೆಂದು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಈ ಮೂಲಕ ಕೋರಿಕೊಳ್ಳುತ್ತೇವೆ.
