ತಮ್ಮೂರಿನ ರಸ್ತೆಗಾಗಿ ಯುವಜನ ಸಂಘದಿಂದ ಪತ್ರ ಚಳುವಳಿ
ಮುಚ್ಚವೀರನಹಳ್ಳಿ ಗ್ರಾಮಕ್ಕೆ ಸುವ್ಯವಸ್ಥಿತ ರಸ್ತೆ ಮಾಡಿಸುವಂತೆ ಬೆಳಕು ಯುವಜನ ಸಂಘದಿಂದ ಪತ್ರ ಚಳವಳಿಯನ್ನು ಮಾಡಲಾಯಿತು.
ಸಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ತಾಳಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಚ್ಚವೀರನಹಳ್ಳಿ ಗ್ರಾಮದಿಂದ ಜನರು ತಮ್ಮ ಕೆಲಸಕಾರ್ಯಗಳಿಗೆ ದಿನನಿತ್ಯವೂ ಮಣ್ಣಿನ ಕಚ್ಚಾ ರಸ್ತೆಯ ಮೂಲಕ ಸಂಚಾರ ಮಾಡುತ್ತಿದ್ದೇವೆ. ತಮ್ಮ ಊರಿನಿಂದ ತಾಳಗುಂದ ಗ್ರಾಮಕ್ಕೆ ಚಿಕ್ಕದಾದ ಮಣ್ಣಿನ ರಸ್ತೆಯಿದೆ. ಈ ರಸ್ತೆಯು ಮಳೆಗಾಲದಲ್ಲಿ ಸಂಚರಿಸಲು ಕಷ್ಟಕರವಾಗುತ್ತಿದೆ. ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿ ಎಷ್ಟೋ ಜನರು ಬಿದ್ದು ಗಾಯಗಳಾಗಿವೆ. ಆಗಾಗಿ ಸಂಬಂಧ ಪಟ್ಟ ಇಲಾಖೆಯವರು ಆದಷ್ಟು ಬೇಗ ನಮ್ಮೂರಿನ ರಸ್ತೆಗೆ ಡಾಂಬರ್ ಹಾಕಿಕೊಡುವ ಮೂಲಕ ರಸ್ತೆಯನ್ನು ಸರಿಪಡಿಸಬೇಕಾಗಿದೆ. ಅದರ ಭಾಗವಾಗಿ ಇಂದು ನಮ್ಮ ಸಂಘದಿಂದ ಶಿರಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಟಿ.ಬಿ ಜಯಚಂದ್ರರವರಿಗೆ ಎಲ್ಲರೂ ಸೇರಿ ಪತ್ರ ಚಳುವಳಿಯನ್ನು ಮಾಡಲಾಗುತ್ತಿದೆ ಎಂದು ಬೆಳಕು ಯುವಜನ ಸಂಘದ ಸಂಚಾಲಕರಾದ ನರಸಿಂಹರಾಜು ಯು ರವರು ಪತ್ರ ಚಳುವಳಿ ಮಾಡುವ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರ ಚಳುವಳಿಯ ಸಂದರ್ಭದಲ್ಲಿ ಸಂಘದ ಸದಸ್ಯರಾದ ರಮ್ಯ, ಚೈತ್ರ, ಪ್ರಿಯಾಂಕ, ಪ್ರೀತಂ, ಸಂಜಯ್, ಭೂತೇಶ್, ಯಶವಂತ್, ಸಿದ್ದರಾಜು, ಭರತ್ ರವರು ಹಾಜರಿದ್ದರು.
