ಅರಸು ದಾಖಲೆ ಮುರಿದ ಸಿದ್ದರಾಮಯ್ಯ ಸಾಧಿಸಿದ್ದು ಏನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು (ಜನವರಿ 7 ರಂದು) ಈ ನಾಡು ಕಂಡ ಶ್ರೇಷ್ಠ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಡಳಿತದ ದಿನಗಳ ದಾಖಲೆ ಮುರಿದಿದ್ದಾರೆ. ಸಿದ್ದರಾಮಯ್ಯ ಅವರು ಅರಸು ಅವರು ಅಧಿಕಾರದಲ್ಲಿ ಇದ್ದ 2,789 ದಿನಗಳಿಗಿಂತ ಒಂದು ದಿನ ಹೆಚ್ಚಿಗೆ ಅಂದರೆ 2,790 ದಿನ ಅಧಿಕಾರದಲ್ಲಿ ಇದ್ದಾರೆ. ಅರಸು ಅವರು ಒಬ್ಬ ಮುತ್ಸದ್ದಿ, Statesman. ಸಿದ್ದರಾಮಯ್ಯ ಅವರು ಒಬ್ಬ ರಾಜಕಾರಣಿ, Politician.ನೀವು ಅಧಿಕಾರದಲ್ಲಿ ಎಷ್ಟು ದಿನ ಇದ್ದಿರಿ ಎನ್ನುವುದು ಮುಖ್ಯವಲ್ಲ. ಇದ್ದ ದಿನಗಳಲ್ಲಿ ಜನರಿಗಾಗಿ ಏನು ಮಾಡಿದಿರಿ ಎನ್ನುವುದು ಮುಖ್ಯ. ಇದನ್ನು ಇತಿಹಾಸ ಕೇಳುತ್ತದೆ. ನಾನು ನೀವು ಕೇಳಿದರೆ ಅದಕ್ಕೆ ಬೇರೆ ಅರ್ಥ ಬರಬಹುದು. ಇತಿಹಾಸದ ಪುಟಗಳಲ್ಲಿ ಅರಸು ಅವರು ಅಜರಾಮರವಾಗಿ ಉಳಿದಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಕಾರಣಕ್ಕಾಗಿ ಇತಿಹಾಸದಲ್ಲಿ ಉಳಿಯಬೇಕು ಎಂದು ಇತಿಹಾಸವೇ ಕೇಳುತ್ತಿದೆ.ಅರಸು ಅವರು 1970 ರ ದಶಕದಲ್ಲಿ ಪಕ್ಷದ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕಂಡು ಕೇಳರಿಯದ ಜನರಿಗೆ ಟಿಕೆಟ್ ಕೊಟ್ಟು ಅವರನ್ನು ಗೆಲ್ಲಿಸಿಕೊಂಡು ಬಂದರು. ಹಾಗೆ ಬಂದವರಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ ಮತ್ತು ಧರ್ಮಸಿಂಗ್ ಮುಖ್ಯರಾದವರು. ಖರ್ಗೆಯವರು ಎಐಸಿಸಿ ಅಧ್ಯಕ್ಷ ಹುದ್ದೆಗೆ ಏರಿದರು. ಮೊಯಿಲಿ ಮತ್ತು ಧರ್ಮಸಿಂಗ್ ಮುಖ್ಯಮಂತ್ರಿಗಳಾದರು.ಪಕ್ಷದ ಅಧ್ಯಕ್ಷನಾಗಿ ದುಡಿದು ಅದನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗುವುದು ನೈತಿಕ ಅಧಿಕಾರ. ಅದು ಕೂಲಿ ಮಾಡಿ ಸಂಬಳ ಕೇಳಿದಂತೆ. ಸಿದ್ದರಾಮಯ್ಯನವರು ಎರಡು ಸಾರಿ ಮುಖ್ಯಮಂತ್ರಿಯಾದರು. ಮೊದಲನೆಯ ಸಾರಿ 2013 ರಲ್ಲಿ ಈ ಹುದ್ದೆಗೆ ನ್ಯಾಯವಾಗಿ ಬರಬೇಕಿದ್ದ, ಆಗ ಪಕ್ಷದ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಅವರನ್ನು ಕೊರಟಗೆರೆಯಲ್ಲಿ ಸೋಲಿಸಿ ಅವರು ಅಧಿಕಾರಕ್ಕೆ ಬರುವುದನ್ನೇ ತಪ್ಪಿಸಿದರು. ಕೊನೆಯ ವರೆಗೂ ಅವರನ್ನು ಕನಿಷ್ಠ ಉಪಮುಖ್ಯಮಂತ್ರಿಯೂ ಮಾಡಲಿಲ್ಲ.ಎರಡನೇ ಸಾರಿ (2023) ಪಕ್ಷದ ಅಧ್ಯಕ್ಷರಾಗಿ ಇದ್ದವರು ಡಿ.ಕೆ. ಶಿವಕುಮಾರ್. ಅವರು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದರೆ ಸಿದ್ದರಾಮಯ್ಯ ತಾವು ಬಂದು ಮುಖ್ಯಮಂತ್ರಿಯಲ್ಲಿ ಖುರ್ಚಿಯಲ್ಲಿ ಕುಳಿತುಕೊಂಡರು. ಇದು ಯಾವ ನೈತಿಕ ರಾಜಕಾರಣ ಎಂಬುದನ್ನು ಜನರೇ ತೀರ್ಮಾನಿಸಬೇಕು. ಮಜಾವಾದಿ ರಾಜಕಾರಣದ ಮಾದರಿ:
ಸಿದ್ದರಾಮಯ್ಯ ಎರಡು ಸಾರಿ ಮುಖ್ಯಮಂತ್ರಿ, ಎರಡು ಸಾರಿ ಉಪಮುಖ್ಯಮಂತ್ರಿ, ಎರಡು ಸಾರಿ ವಿರೋಧ ಪಕ್ಷದ ನಾಯಕ ಆಗಿದ್ದರು. ಆದರೆ, ಒಂದು ಸಾರಿಯೂ ಅವರು ಪಕ್ಷದ ಅಧ್ಯಕ್ಷರಾಗಿ ಇರಲಿಲ್ಲ. ಇದು ದುಡಿಯದೆ ಸಂಬಳ ತಿನ್ನುವ (ಸ)ಮಜಾವಾದಿ ರಾಜಕಾರಣವೇ ಅಥವಾ ಕಾರ್ಯಕರ್ತನ ಹಾಗೆ ದುಡಿದು ಅಧಿಕಾರ ಪಡೆಯುವ ರಾಜಕಾರಣವೇ ಇದನ್ನೂ ಜನರೇ ತೀರ್ಮಾನಿಸಬೇಕು.
ಅರಸು ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ನಿಜವಾಗಿ ಶ್ರಮಿಸಿದವರು. ಅದಕ್ಕಾಗಿ ಅವರು ತಮ್ಮ ಜಾತಿಯವರಲ್ಲದ ಎಲ್.ಜಿ. ಹಾವನೂರು ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಿಸಿ ಅವರು ಕೊಟ್ಟ ವರದಿಯನ್ನು ಬಲಿಷ್ಠ ಸಮುದಾಯಗಳ ವಿರೋಧದ ನಡುವೆಯೂ ಜಾರಿಗೊಳಿಸಿದರು. ಮುಂದೆ ಇದು ಯಾರಿಗೂ ಸಾಧ್ಯವಾಗಲಿಲ್ಲ. ಅದಕ್ಕಾಗಿ ಇಂದು ಅರಸು ಅವರು ಹಿಂದುಳಿದ ವರ್ಗಗಳ ಜನರ ಜೀವನದ ದೊಡ್ಡ ಆಶಾಕಿರಣ ಎನಿಸಿದ್ದಾರೆ.ಸಿದ್ದರಾಮಯ್ಯನವರು ತಮ್ಮದೇ ಸಮುದಾಯದ ಎಚ್.ಕಾಂತರಾಜು ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆಗೆ ಅಯೋಗ ನೇಮಿಸಿದರು. ಅದಕ್ಕಾಗಿ ಜನರ ತೆರಿಗೆಯ 180 ಕೋಟಿ ರೂಪಾಯಿಗಳನ್ನು ವ್ಯಯ ಮಾಡಿದರು. ಕಾಂತರಾಜು ಕೊಟ್ಟ ವರದಿಯ ಮೇಲೆ ಇವರೇ ಹತ್ತು ವರ್ಷ ಕುಳಿತುಕೊಂಡರು. ಅದನ್ನು ಜಾರಿಗೊಳಿಸಲಿಲ್ಲ ಎಂದು ಬೇರೆಯವರ ವಿರುದ್ಧ ದೂರಿದರು.
ಬದ್ಧತೆ ಮತ್ತು ಆಢಾಢಭೂತಿತನ:ಈ ವಿಚಾರದಲ್ಲಿ ಅರಸು ಅವರ ಬದ್ಧತೆ ಎಲಿ? ಸಿದ್ದರಾಮಯ್ಯನವರ ಆಷಾಢಭೂತಿತನ ಎಲ್ಲಿ? ಎತ್ತಣ ಮಾಮರ! ಎತ್ತಣ ಕೋಗಿಲೆ? ಅರಸು ಅವರದು ನಿಸ್ವಾರ್ಥ ರಾಜಕಾರಣ. ಸಿದ್ದರಾಮಯ್ಯನವರದು ಪರಮ ಸ್ವಾರ್ಥದ ರಾಜಕಾರಣ. ಅವರು ಯಾವಾಗಲೂ ರಾಜಕಾರಣ ಇರುವುದು ಸಿದ್ದರಾಮಯ್ಯನವರಿಗಾಗಿ, ಸಿದ್ದರಾಮಯ್ಯನವರದು ಮತ್ತು ಸಿದ್ದರಾಮಯ್ಯನವರಿಂದ ಎಂದು ತಿಳಿಯುತ್ತಾರೆ. ಅದರಂತೆಯೇ ನಡೆದುಕೊಳ್ಳುತ್ತಾರೆ.
ರಾಜಕಾರಣ ಹೀಗೆ ವ್ಯಕ್ತಿ ಕೇಂದ್ರಿತ ಆಗಿರಬಾರದು. ಅದು ಜನ ಕೇಂದ್ರಿತ ಆಗಿರಬೇಕು. ಅರಸು ಅವರು ಮಾಡಿದ್ದು ಜನಕೇಂದ್ರಿತ ರಾಜಕಾರಣ. ಅದಕ್ಕಾಗಿಯೇ ಅವರು ಭೂ ಸುಧಾರಣೆ ತಂದರು. ಅಲ್ಲಿಯೂ ಅವರು ಬಲಿಷ್ಠ ವರ್ಗಗಳನ್ನು ಎದುರು ಹಾಕಿಕೊಂಡು ಅವರ ಜಮೀನು ವಶಪಡಿಸಿಕೊಂಡು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದು ಅನೇಕ ಬಡವರು, ದಲಿತರು, ಕೂಲಿಕಾರರು ಭೂಮಿಯ ಒಡೆಯರು ಆಗುವಂತೆ ಮಾಡಿದರು.
ಸಿದ್ದರಾಮಯ್ಯನವರು ಅದೇ ಬಡವರ ನಿವೇಶನಗಳನ್ನು ತಮ್ಮ ಹೆಂಡತಿಯ ಹೆಸರಿಗೆ ಬರೆಸಿಕೊಂಡರು. ಅರಸು ಅವರು ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ನಿವಾರಿಸಿ ಆ ಕೆಲಸ ಮಾಡುತ್ತಿದ್ದ ಭಂಗಿ ಕುಟುಂಬಗಳಿಗೆ ಘನತೆ ತಂದುಕೊಟ್ಟರು.
ಒಡೆದು ಆಳುವ ರಾಜಕಾರಣ:
ಸಿದ್ದರಾಮಯ್ಯನವರು ಒಡೆದು ಆಳುವ ರಾಜಕಾರಣ ಮಾಡಿದರು. ಮುಸ್ಲಿಂ ಮತ್ತು ಹಿಂದೂಗಳನ್ನು ಒಡೆದು ಆಳುವುದರಲ್ಲಿ ಅವರು ತಮ್ಮ ರಾಜಕಾರಣದ ಅಸ್ತಿತ್ವವನ್ನು ಕಂಡುಕೊಂಡರು. ಅದಕ್ಕಾಗಿಯೇ ಇವತ್ತು ಕರ್ನಾಟಕ ಕೋಮು ದಳ್ಳುರಿಯಲ್ಲಿ ಬೇಯುತ್ತಿದೆ. ರೋಮ್ ನಗರಕ್ಕೆ ಬೆಂಕಿ ಹೊತ್ತಿಕೊಂಡಾಗ ನೀರೋ ಪಿಟೀಲು ನುಡಿಸುತ್ತಿದ್ದ ಎನ್ನುವ ಹಾಗೆ ಸಿದ್ದರಾಮಯ್ಯನವರು ಜನರನ್ನು ಬೆಂಕಿಗೆ ತಳ್ಳಿ ತಾವು ಮೈ ಕಾಯಿಸಿಕೊಳ್ಳುತ್ತಿದ್ದಾರೆ.
ಹೆಗಡೆ-ಯಡಿಯೂರಪ್ಪ ಸಮವೂ ಅಲ್ಲ:
ಅರಸು ಅವರು ಬಿಡಿ. ಸಿದ್ದರಾಮಯ್ಯನವರ ನಾಯಕರಾಗಿದ್ದ ರಾಮಕೃಷ್ಣ ಹೆಗಡೆ ಅವರು ಕೇವಲ 5 ವರ್ಷ 216 ದಿನ ಅಧಿಕಾರದಲ್ಲಿ ಇದ್ದರು. ಅವರು ಮಾಡಿದ ಒಂದು ಕೆಲಸವನ್ನಾದರೂ ಸಿದ್ದರಾಮಯ್ಯ ಮಾಡಲಿಲ್ಲ. ಹೆಗಡೆಯವರು ಪಂಚಾಯಿತಿ ರಾಜ್ ವ್ಯವಸ್ಥೆ ತಂದು ಅಧಿಕಾರ ವಿಕೇಂದ್ರೀಕರಣಕ್ಕಾಗಿ ಇಡೀ ದೇಶದಲ್ಲಿ ಒಂದು ಮಾದರಿ ಒದಗಿಸಿದರು. ಸಿದ್ದರಾಮಯ್ಯನವರು ಇದುವರೆಗೆ ಪಂಚಾಯಿತಿ ಚುನಾವಣೆಗಳನ್ನು ಮಾಡಿಲ್ಲ. ಅವುಗಳನ್ನು ಮುಂದೂಡುವುದರಲ್ಲಿ ಅವರು ನಿರತರಾಗಿದ್ದಾರೆ. ಪಂಚಾಯಿತಿ ವ್ಯವಸ್ಥೆ ಇದೆ ಎನ್ನುವುದಾದರೂ ಅವರಿಗೆ ನೆನಪು ಇದೆಯೋ ಇಲ್ಲವೋ ನಮಗೆ ಗೊತ್ತಿಲ್ಲ.
ಹೆಗಡೆಯವರು ಮೌಲ್ಯಾಧಾರಿತ ರಾಜಕಾರಣ ಮಾಡಿದರು. ಅವರು ವಿರುದ್ಧ ಸಣ್ಣ ಆರೋಪ ಬಂದರೂ ಅವರು ರಾಜೀನಾಮೆ ಕೊಟ್ಟು ಹೊರಟು ಹೋಗುತ್ತಿದ್ದರು. ಸಿದ್ದರಾಮಯ್ಯನವರ ಸರ್ಕಾರ ಈ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ. ಅವರ ಸರ್ಕಾರ ಮಾತ್ರವಲ್ಲ, ಸ್ವತಃ ಸಿದ್ದರಾಮಯ್ಯನವರ ವಿರುದ್ಧವೇ ಭ್ರಷ್ಟಾಚಾರದ ಆರೋಪಗಳು ಇವೆ. ಆದರೆ, ಅವರೇನೂ ಜಪ್ಪಯ್ಯ ಎಂದಿಲ್ಲ.
ಹೆಗಡೆಯವರು ಲೋಕಾಯುಕ್ತಕ್ಕೆ ಶಕ್ತಿ ತುಂಬಿದರು. ಸಿದ್ದರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲಿಯೇ ಲೋಕಾಯುಕ್ತಕ್ಕೆ ಮಣ್ಣು ಕೊಟ್ಟಿದ್ದರು. ಅದನ್ನು ಅಟ್ಟಹಾಸದ ಹಾಗೆ ಕೊಚ್ಚಿಕೊಂಡರು.
ರೈತ ನಾಯಕ ಯಡಿಯೂರಪ್ಪ:
ನಮ್ಮ ನಾಯಕರಾದ ಯಡಿಯೂರಪ್ಪನವರು 5 ವರ್ಷ 82 ದಿನ ಅಧಿಕಾರದಲ್ಲಿ ಇದ್ದರು. ರೈತ ಪರ ಬಜೆಟ್ ಮಂಡಿಸಿದ ಮೊದಲಿಗರು ಯಡಿಯೂರಪ್ಪನವರು. ಅವರು ಹಸಿರು ಶಾಲು ಹಾಕಿಕೊಂಡು ಅಧಿಕಾರದ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಸಿದ್ದರಾಮಯ್ಯ ಕಾಲದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡು ಇಡೀ ರೈತ ಸಮುದಾಯ ಬೀದಿ ಪಾಲಾಗಿದೆ. ಯಡಿಯೂರಪ್ಪನವರು ಎಂದೂ ವಿಭಜಕ ರಾಜಕಾರಣ ಮಾಡಲಿಲ್ಲ. ಅವರು ಎಲ್ಲರನ್ನೂ ತಮ್ಮ ತೆಕ್ಕೆಯಲ್ಲಿ ತೆಗೆದುಕೊಂಡು ಹೋದರು. ಸಣ್ಣ ಸಣ್ಣ ಸಮುದಾಯಗಳಿಗೆ ಅವರು ಕೊಟ್ಟ ಪ್ರಾತಿನಿಧ್ಯವನ್ನು ಇದುವರೆಗೆ ಯಾವ ರಾಜಕೀಯ ನಾಯಕರೂ ಕೊಟ್ಟಿಲ್ಲ. ಯಡಿಯೂರಪ್ಪನವರು ಅನೇಕ ಮಠ ಮಾನ್ಯಗಳಿಗೆ ಅನುದಾನ ಬಿಡುಗಡೆ ಮಾಡಿ ಅವರು ಸಶಕ್ತಗೊಳ್ಳುವಂತೆ ಮಾಡಿದರು.
ಅದಕ್ಕಾಗಿ ಕರ್ನಾಟಕದ ಚರಿತ್ರೆಯಲ್ಲಿ ಅರಸು, ಹೆಗಡೆ, ಯಡಿಯೂರಪ್ಪನವರು ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಅವರು ಜನನಾಯಕರು ಎನಿಸಿದ್ದಾರೆ. ದುರ್ದೈವ ಎಂದರೆ ಸಿದ್ದರಾಮಯ್ಯನವರು ಯಾವಾಗ ಅಧಿಕಾರ ಬಿಟ್ಟು ಕೆಳಗೆ ಇಳಿಯುತ್ತಾರೆ ಎಂದು ಅವರ ಪಕ್ಷದ ಅಧ್ಯಕ್ಷರೇ ಕಾಯುತ್ತ ಕುಳಿತಿದ್ದಾರೆ. ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ಇದಕ್ಕಿಂತ ವಿಪರ್ಯಾಸ ಬೇರೆ ಏನಾದರೂ ಇರಲು ಸಾಧ್ಯವೇ?
ಮುತ್ಸದ್ದಿಗಳನ್ನು ದೇಶ ನೆನಪು ಇಡುತ್ತದೆ. ಇತಿಹಾಸವು ದಾಖಲಿಸುತ್ತದೆ. ರಾಜಕಾರಣಿಗಳನ್ನು ಜನರು ಬಹುಬೇಗ ಮರೆಯುತ್ತಾರೆ. ಪತ್ರಿಕಾಗೋಷ್ಠಿಯಲ್ಲಿ
ಗೂಳೂರು ಶಿವಕುಮಾರ್ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ನರಸಿಂಹಮೂರ್ತಿ, ವಿಜಿ ಕುಮಾರ್ ವೆಂಕಟೇಶ್, ಓಂ ನಮೋ ನಾರಾಯಣ ಬಿಜೆಪಿ ಮುಖಂಡ ಪ್ರಭಾಕರ,ಸ್ವಾಮಿ, ಶಿವರಾಜ್ ಇನ್ನಿತರರು ಉಪಸ್ಥಿತರಿದ್ದರು
